ಚಿತ್ರದುರ್ಗ: ಬಡ, ಕೂಲಿ ಕಾರ್ಮಿಕರ ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡಲು ಆರ್‌ಟಿಇ ಕಾಯ್ದೆ ಅಡಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಡ ಪ್ರತಿಭಾವಂತ ಮಕ್ಕಳಿಗೆ ಆರ್‌ಟಿಇ ಕಾಯ್ದೆಯನ್ವಯ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕು. ಖಾಸಗಿ ಶಾಲೆಗಳಲ್ಲಿ ಶೇ. 25 ರಷ್ಟು ಬಡ ಮಕ್ಕಳಿಗೆ ಸೀಟುಗಳನ್ನು ಕಾಯ್ದಿರಿಸಿ ಉಚಿತ ಶಿಕ್ಷಣ ನೀಡಬೇಕೆಂಬ ಕಾಯ್ದೆ ಇದ್ದರೂ ಆಡಳಿತ ಮಂಡಳಿಯವರು ಪ್ರತಿಭಾವಂತ ಬಡ ಮಕ್ಕಳು ಅರ್ಜಿ ಹಾಕಲು ಅವಕಾಶವನ್ನೇ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಟಿಇ ಕಾಯ್ದೆ ತಿದ್ದುಪಡಿ ಪ್ರಕಾರ ಖಾಸಗಿ ಪ್ರತಿಷ್ಠಿತ ಶಾಲೆಗಳಲ್ಲಿ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌಖೀಕವಾಗಿ ಪೋಷಕರಿಗೆ ಉತ್ತರಿಸುತ್ತಿದ್ದಾರೆ. ಇದರಿಂದ ಹಿಂದುಳಿದ ಬರಪೀಡಿತ ಚಿತ್ರದುರ್ಗ ಜಿಲ್ಲೆಯ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ದೂರಿದರು.
ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಬದಲು ಸರ್ಕಾರಿ ಶಾಲೆಯಲ್ಲಿ ಆರ್‌ಟಿಇ ಅರ್ಜಿ ಹಾಕಲು ಅಂರ್ತಜಾಲದಲ್ಲಿ ತಿಳಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಆರ್‌ಟಿಇ ಅರ್ಜಿ ಹಾಕುವ ಅವಶ್ಯಕತೆ ಇರುವುದಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆದುಕೊಂಡು ಹೋದರೆ ದಾಖಲಾತಿ ಮಾಡಿಕೊಳ್ಳುವುದಾಗಿ ಶಿಕ್ಷಣ ಇಲಾಖೆ ಅಕಾರಿಗಳು ಹೇಳುತ್ತಿದ್ದಾರೆ. ಪೋಷಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲವೆಂದು ಸರ್ಕಾರಿ ಶಾಲೆಗೆ ಸೇರಿಸುತ್ತಿಲ್ಲ. ಗುಣಮಟ್ಟದ ಶಿಕ್ಷಣ ನೀಡಿದರೆ ಯಾರೂ ಖಾಸಗಿ ಶಾಲೆಗಳಿಗೆ ಹೋಗುವುದಿಲ್ಲ ಮತ್ತು ಆರ್‌ಟಿಇ ಅರ್ಜಿಗಳನ್ನೂ ಹಾಕುವುದಿಲ್ಲ ಎಂದರು.
2018-19ನೇ ಸಾಲಿಗೆ ಕರ್ನಾಟಕದಲ್ಲಿ ಆರ್‌ಟಿಇಗೆ ಸುಮಾರು 60 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆರ್‌ಟಿಇ ಕಾಯ್ದೆ ತಿದ್ದುಪಡಿ ನಂತರ 2019-20ನೇ ಸಾಲಿಗೆ ರಾಜ್ಯದಲ್ಲಿ ಕೇವಲ ಆರರಿಂದ ಏಳು ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಇದರಿಂದ ಬಡ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಆರ್‌ಟಿಇ ಕಾಯ್ದೆ ಪ್ರಕಾರ ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿ ಎಲ್ಲ ಬಡ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಆರ್. ಮೊಹಮ್ಮದ್ ಮನವಿ ಮಾಡಿದರು. ತಿಪ್ಪೇಸ್ವಾಮಿ, ಮಹಮ್ಮದ್ ಶಕೀಲ್, ಪ್ರಕಾಶ್ ಇತರರು ಇದ್ದರು.