ಚಿತ್ರದುರ್ಗ: ಹಾಡಹಗಲೇ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿರುವ ಸಿನಿಮೀಯ ಘಟನೆಯೊಂದು ನಗರದ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
ಬ್ಯಾಂಕ್ ಕಾಲೋನಿಯಲ್ಲಿರುವ ಹೋಟೆಲ್ ಉದ್ಯಮಿ ನಜೀರ್ ಅಹ್ಮದ್ ಮನೆಯಲ್ಲಿ ಶನಿವಾರ ಬೆಳಗ್ಗೆ 9:20ರ ಸುಮಾರಿಗೆ ಈ ಘಟನೆ ನಡೆದಿದೆ.
ದುಷ್ಕರ್ಮಿಗಳು ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳಿಂದ ಬೆದರಿಸಿ ಮನೆಯ ಇಬ್ಬರು ಸದಸ್ಯರನ್ನು ಒತ್ತೆಯಾಳಾಗಿಟ್ಟುಕೊಂಡು 50 ಲಕ್ಷ ರೂ. ನಗದು ಹಾಗೂ ಮನೆಯ ಸದಸ್ಯರನ್ನು ಕೊಠಡಿಯಲ್ಲಿ ಕೂಡಿ ಹಾಕಿ 120 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ ಎಂದು ನಜೀರ್ ಅಹ್ಮದ್ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.
ಬೆಳಗ್ಗೆ ಮನೆಗೆ ಬಂದ ದುಷ್ಕರ್ಮಿಗಳು ಮಧ್ಯಾಹ್ನದವರೆಗೆ ಮನೆಯಲ್ಲೇ ಇದ್ದು, ಕುಟುಂಬದವರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಹಣಕ್ಕೆ ಬೇಡಿಕೆ ಇಟ್ಟಾಗ ದೂರವಾಣಿ ಮೂಲಕ ಸ್ನೇಹಿತರನ್ನು ಸಂಪರ್ಕಿಸಿ 50 ಲಕ್ಷ ರೂ. ಹಣ ಹೊಂದಿಸಿದ್ದಾರೆ. ನಜೀರ್ ಅವರ ಪುತ್ರ ಸಮೀರ್ ಹಾಗೂ ಅಳಿಯ ಶಹಜಹಾನ್ ಅವರನ್ನು ಒತ್ತೆಯಾಗಿಟ್ಟುಕೊಂಡು ಕಾರಿನಲ್ಲಿ ಕರೆದೊಯ್ದ ದುಷ್ಕರ್ಮಿಗಳು ಸರ್ವೋದಯ ಹೋಟೆಲ್ ಸಮೀಪ 25 ಲಕ್ಷ ಹಣ ಪಡೆದಿದ್ದಾರೆ. ದಾವಣಗೆರೆ ಸಂಬಂಧಿಕರ ಮನೆಯಲ್ಲಿ 25 ಲಕ್ಷ ರೂ. ಪಡೆದು ಚನ್ನಗಿರಿ ಮಾರ್ಗವಾಗಿ ಶನಿವಾರ ರಾತ್ರಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಪರಾರಿಯಾಗುತ್ತಿದ್ದಾಗ ಸಂತೆಬೆನ್ನೂರು ಬಳಿಯ ಚೆಕ್‌ಪೋಸ್ rನಲ್ಲಿ ಪೊಲೀಸರು ಕಾರು ಪರಿಶೀಲನೆಗೆ ಮುಂದಾಗಿದ್ದಾರೆ. ಕಾರು ನಿಲ್ಲಿಸದ ಕಾರಣ ಅನುಮಾನಗೊಂಡು ಬೆನ್ನಟ್ಟಿದಾಗ ಚಿಕ್ಕಬ್ಬಿಗೆರೆ ಮಾರ್ಗವಾಗಿ ತೆರಳುತ್ತಿದ್ದ ದುಷ್ಕರ್ಮಿಗಳು ರಸ್ತೆ ಬಂದ್ ಆಗಿದ್ದರಿಂದ ಕಾರು ಇಳಿದು, ಪರಾರಿಯಾಗಲು ಯತ್ನಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಆರೋಪಿಯೊಬ್ಬ ಸೆರೆ ಸಿಕ್ಕಿದ್ದಾನೆ ಎಂದು ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.
ಇದೇ ಕಾರಿನಲ್ಲಿ ಒತ್ತೆಯಾಳಾಗಿದ್ದ ಸಮೀರ್ ಹಾಗೂ ಶಹಜಹಾನ್ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಸಿಕ್ಕಿಬಿದ್ದ ಬಳಿಕ ನಜೀರ್ ಅಹ್ಮದ್ ಅವರು ಬಡಾವಣೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಐಜಿಪಿ ತ್ಯಾಗರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ.