Advertisement

ಜಿಪಂನಲ್ಲೂ ರೆಸಾರ್ಟ್‌ ರಾಜಕೀಯ!

09:14 AM Jan 27, 2019 | Team Udayavani |

ಚಿತ್ರದುರ್ಗ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ರೆಸಾರ್ಟ್‌ ರಾಜಕೀಯ ಈಗ ಜಿಲ್ಲಾ ಪಂಚಾಯತ್‌ಗೂ ಕಾಲಿಟ್ಟಿದೆ. ಈ ಬಾರಿ ಶತಾಯಗತಾಯ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರನ್ನು ಪದಚ್ಯುತಗೊಳಿಸಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸದಸ್ಯರು, ಗಣರಾಜ್ಯೋತ್ಸವದ ಮುನ್ನಾ ದಿನವಾದ ಶುಕ್ರವಾರ ರಾತ್ರಿ ಗೋವಾ ರೆಸಾರ್ಟ್‌ಗೆ ತೆರಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಜಿಲ್ಲೆಯಲ್ಲಿ ತೀವ್ರ ಬರ ಇದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಅಕ್ರಮ ಮರಳುಗಾರಿಕೆ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ ಜಿಪಂ ಸದಸ್ಯರ ಪ್ರವಾಸ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಸಭೆ ಕರೆಯುವಂತೆ ಜಿಪಂ ಉಪಾಧ್ಯಕ್ಷರಿಗೆ ಜ. 25 ರಂದು ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ ಮನವಿ ಸಲ್ಲಿಕೆಗೆ ಸದಸ್ಯರು ಬಹು ಸಂಖ್ಯೆಯಲ್ಲಿ ಆಗಮಿಸದೇ ಇದ್ದಿದ್ದರಿಂದ ಜ. 28 ರಂದು ಅವಿಶ್ವಾಸ ನಿರ್ಣಯ ಮಂಡನೆಗೆ ಮನವಿ ಸಲ್ಲಿಸಲು ಜಿಪಂ ಸದಸ್ಯರು ಸಿದ್ಧತೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ರಾತ್ರಿ ದಿಢೀರ್‌ ಹೊರ ರಾಜ್ಯದತ್ತ ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆ ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಫಲವಾಯ್ತು ತಂತ್ರಗಾರಿಕೆ: ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲು ಬಾರದಿದ್ದ ಸದಸ್ಯರು ರೆಸಾರ್ಟ್‌ ಪ್ರವಾಸಕ್ಕೆ ಹೇಗೆ ಪ್ರತ್ಯಕ್ಷರಾದರು ಎಂಬ ಪ್ರಶ್ನೆಯೂ ಎದುರಾಗಿದೆ. ಪೂರ್ವ ಯೋಜನೆಯಂತೆ ಕೇವಲ ಮೂರ್ನಾಲ್ಕು ಸದಸ್ಯರು ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿ ಉಳಿದ ಸದಸ್ಯರ ಜೊತೆ ಪ್ರವಾಸ ತೆರಳಬೇಕು ಎಂದಾಗಿತ್ತು. ಆದರೆ ಜಿಪಂ ಸದಸ್ಯರು. ಉಪಾಧ್ಯಕ್ಷರು ಹಾಗೂ ಸಿಇಒ ಚಲನವಲನದ ಮೇಲೆ ಮಾಧ್ಯಮಗಳು ನಿಗಾ ಇಟ್ಟಿದ್ದರಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವ ಸದಸ್ಯರ ತಂತ್ರ ಫಲಿಸಲಿಲ್ಲ. ಒಂದು ವೇಳೆ ಮಾಧ್ಯಮದವರಿಗೆ ಮಾಹಿತಿ ತಿಳಿಯದೇ ಇದ್ದಲ್ಲಿ ಹಿಂದಿನ ದಿನಾಂಕವನ್ನು ನಮೂದು ಮಾಡಿ ಅವಿಶ್ವಾಸ ನಿರ್ಣಯ ಮಂಡಿಸಲು ಮನವಿ ಪತ್ರವನ್ನು ಉಪಾಧ್ಯಕ್ಷರಿಗೆ ಕೊಡುವ ನಿರ್ಧಾರ ಮಾಡಲಾಗಿತ್ತು ಎನ್ನಲಾಗಿದೆ.

ಜಿಪಂ ಉಪಾಧ್ಯಕ್ಷೆ ಕಾಂಗ್ರೆಸ್‌ ಪಕ್ಷದ ಸುಶೀಲಮ್ಮ, ಸದಸ್ಯರಾದ ಕೌಶಲ್ಯ, ಸುಧಾ ರವಿಕುಮಾರ್‌, ಕೃಷ್ಣಮೂರ್ತಿ ಹೊರತು ಪಡಿಸಿ ಉಳಿದ 18 ಮಂದಿ ಜಿಪಂ ಸದಸ್ಯರ ಜೊತೆಗೆ ಜೆಡಿಎಸ್‌ ಮತ್ತು ಬಿಜೆಪಿ ಪಕ್ಷದ ತಲಾ ಇಬ್ಬರು ಸದಸ್ಯರು ಸೇರಿ ಒಟ್ಟು 22 ಮಂದಿ ಹೊರ ರಾಜ್ಯದತ್ತ ಪ್ರವಾಸ ತೆರಳಿದ್ದಾರೆ. ಕಾಂಗ್ರೆಸ್‌ ಪಕ್ಷದ ಎಲ್ಲ ಸದಸ್ಯರೂ ಕಡ್ಡಾಯವಾಗಿ ಗೋವಾ ಟೂರ್‌ ಹೋಗಲೇಬೇಕು ಎನ್ನುವ ಪಕ್ಷದ ವರಿಷ್ಠರ ಕಟ್ಟಪ್ಪಣೆಯಿಂದಾಗಿ 18 ಸದಸ್ಯರು ತೆರಳಿದ್ದಾರೆ. ಇಲ್ಲವಾದರೆ ಈ ಸಂಖ್ಯೆ 12ನ್ನು ಮೀರುತ್ತಿರಲಿಲ್ಲ ಎಂದು ಹೇಳಲಾಗಿದೆ.

Advertisement

ಮಗನ ಮದುವೆ ತಯಾರಿಯಲ್ಲಿ ಅಧ್ಯಕ್ಷರು ಬ್ಯುಸಿ: ಒಂದೆಡೆ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಯತ್ನ ನಡೆಯುತ್ತರೆ, ಮತ್ತೂಂದೆಡೆ ಅಧ್ಯಕ್ಷೆ ಸೌಭಾಗ್ಯ ಅವರು ತಮ್ಮ ಮಗನ ಮದುವೆ ತಯಾರಿಯಲ್ಲಿ ಮಗ್ನರಾಗಿದ್ದಾರೆ.

ಸೌಭಾಗ್ಯ ಮತ್ತು ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಅವರ ಪುತ್ರ ಬಿಜ್ಜಳ ಅವರ ವಿವಾಹ ಭೀಮಸಮುದ್ರದ ರಚಿತ ಅವರೊಂದಿಗೆ ಫೆ. 10 ರಂದು ನಡೆಯಲಿದೆ. ಮಗನ ಮದುವೆಯಲ್ಲಿ ಸೌಭಾಗ್ಯ ಬಸವರಾಜನ್‌ ಮಗ್ನರಾಗಿರುವುದರಿಂದ ಅಧಿಕಾರ ಉಳಿಸಿಕೊಳ್ಳಲು ತಂತ್ರ ಹೆಣೆಯುವುದು ಸೌಭಾಗ್ಯ ಅವರಿಎ ಕಷ್ಟವಾಗಲಿದೆ. ಹಾಗಾಗಿ ಈ ಸಂದರ್ಭ ಬಳಸಿಕೊಂಡು ಅವಿಶ್ವಾಸ ನಿರ್ಣಯ ಮಂಡಿಸಿ ಜಯ ಗಳಿಸಬೇಕು ಎಂಬುದು ಕಾಂಗ್ರೆಸ್‌ ಮುಖಂಡರ ಹಠ. ಆದರೆ ಜಿಪಂ ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಅಗತ್ಯವಿರುವ 13 ಸದಸ್ಯರ ಬೆಂಬಲ ಪಡೆದುಕೊಳ್ಳಲು ಸೌಭಾಗ್ಯ ಪ್ರತಿತಂತ್ರ ಹೆಣೆದಿದ್ದಾರೆ ಎಂಬುದು ಅವರ ಆಪ್ತ ಮೂಲಗಳ ಹೇಳಿಕೆ.

ಒಟ್ಟಿನಲ್ಲಿ ರೆಸಾರ್ಟ್‌ ರಾಜಕೀಯ ಎಲ್ಲಿಯವರೆಗೆ ತಲುಪುತ್ತದೆಯೋ, ಗೋವಾಕ್ಕೆ ತೆರಳಿದ ಸದಸ್ಯರು ಸೋಮವಾರ ಆಗಮಿಸಿ ಅವಿಶ್ವಾಸ ನಿರ್ಣಯ ಮಂಡನೆಗೆ ಮನವಿ ಸಲ್ಲಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಸಭೆ ಕರೆಯುವಂತೆ ಡಿ. 26 ರಂದು 31 ಸದಸ್ಯರು ಸಹಿ ಮಾಡಿದ ಪತ್ರ ನೀಡಲಾಗಿತ್ತು. ನಿಯಮಾವಳಿ ಪ್ರಕಾರ 15 ದಿನಗಳಲ್ಲಿ ಸಭೆ ಕರೆಯಬೇಕಿತ್ತು. ಸಭೆ ಕರೆಯಲು ವಿಫಲವಾಗಿದ್ದರಿಂದ ಹಿಂದೆಯೇ ಉಪಾಧ್ಯಕ್ಷರಿಗೆ ಸಭೆ ಕರೆಯಲು ಮನವಿ ಸಲ್ಲಿಸಬೇಕಿತ್ತು. ಆದರೆ ಉಪಾಧ್ಯಕ್ಷರಿಗೆ ಜ. 28 ರಂದು ಮನವಿ ಸಲ್ಲಿಸಿದರೂ ಊರ್ಜಿತವಾಗುವುದಿಲ್ಲ.
• ಸೌಭಾಗ್ಯ ಬಸವರಾಜನ್‌,
  ಜಿಪಂ ಅಧ್ಯಕ್ಷರು

ಜಿಪಂ ಸದಸ್ಯರು ಗೋವಾ ಅಥವಾ ಬೇರೆ ಊರುಗಳಿಗೆ ಟೂರ್‌ ಹೋಗಿರುವುದು ಗೊತ್ತಿಲ್ಲ. ಬೇಸಿಗೆ ಪ್ರವಾಸ ಎಂದು ಹೋಗಿರಬಹುದು, ಅದಕ್ಕೂ ನೀವು ಕಥೆ ಕಟ್ಟಿದರೆ ಹೇಗೆ, ಗೋವಾಕ್ಕೆ ಹೋಗುತ್ತೇವೆಂದು ನಿಮಗೆ ಯಾರಾದರೂ ಹೇಳಿದ್ದಾರೆಯೇ, ದೇವಸ್ಥಾನ ಅದು ಇದೂ ನೋಡಿಕೊಂಡು ಬರಲು ಹೋಗಿರಬಹುದು. ಹೋಗಿ ಬರಲಿ ಬಿಡಿ.
ವೆಂಕಟರಮಣಪ್ಪ,
 ಜಿಲ್ಲಾ ಉಸ್ತುವಾರಿ ಸಚಿವರು.

ಸಂಖ್ಯಾ ಬಲ: ಒಟ್ಟು ಸದಸ್ಯರು 37 , ಕಾಂಗ್ರೆಸ್‌ 23,  ಬಿಜೆಪಿ  10, ಜೆಡಿಎಸ್‌ 2,  ಪಕ್ಷೇತರರು 2

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next