Advertisement

ಮೆಕ್ಕೆಜೋಳ ಖರೀದಿಗೆ ಹೆಸರು ನೋಂದಾಯಿಸಿ

05:54 PM May 15, 2020 | Naveen |

ಚಿತ್ರದುರ್ಗ: ಶಿಮುಲ್‌ ಮೂಲಕ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಸರ್ಕಾರ ತೀರ್ಮಾನಿಸಿದ್ದು, ಕ್ಷೀರಸಿರಿ ತಂತ್ರಾಂಶದ ಐಡಿ ಮತ್ತು ಫ್ರೂಟ್ಸ್ ತಂತ್ರಾಂಶ ಬಳಕೆ ಮಾಡಿ ರೈತರು ನೋಂದಾಯಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Advertisement

ಮೆಕ್ಕೆಜೋಳ ಮಾದರಿಯನ್ನು ಶುದ್ಧವಾದ ಪಾರದರ್ಶಕ ಬ್ಯಾಗ್‌ ನಲ್ಲಿ ಪ್ಯಾಕಿಂಗ್‌ (1 ಕೆಜಿ) ಮಾಡಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿಗೆ ನೋಂದಣಿ ಸಂಖ್ಯೆ ಜೊತೆ ನೀಡಬೇಕು. ರೈತರು ನಿಗದಿಪಡಿಸಿದ ದಿನ ಮತ್ತು ಸಮಯಕ್ಕೆ ಒಪ್ಪಿದ ಪ್ರಮಾಣದಲ್ಲಿ ಗುಣಮಟ್ಟದ ಮೆಕ್ಕೆಜೋಳವನ್ನು ಎಸ್‌ಎಂಎಸ್
ಮಾಹಿತಿಯಂತೆ ತರಬೇಕು. ಒಬ್ಬ ರೈತ ಪ್ರತಿ ಎಕರೆಗೆ ಗರಿಷ್ಠ 20 ಕ್ವಿಂಟಾಲ್‌ ಗೆ ಮೀರದಂತೆ ಹಾಗೂ ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ 50 ಕ್ವಿಂಟಾಲ್‌ ಮೀರದಂತೆ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಲಾಗಿದೆ. ಮಧ್ಯ ವರ್ತಿಗಳಿಗೆ ಅವಕಾಶವಿರುವುದಿಲ್ಲ. ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡು ರೈತರೇ ನೇರವಾಗಿ ಸರಬರಾಜು ಮಾಡಬೇಕು. ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್‌ ಮೆಕ್ಕೆಜೋಳದ ನಿವ್ವಳ ತೂಕದ ಬೆಲೆ 1760 ರೂ. ಆಗಿದೆ ಎಂದಿದ್ದಾರೆ.

ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ ರೈತರು 2000 ಮೆಟ್ರಿಕ್‌ ಟನ್‌ ಮೆಕ್ಕೆಜೋಳವನ್ನು ಕರ್ನಾಟಕ ಹಾಲು ಮಂಡಳಿ ನಿಗದಿಪಡಿಸಿರುವ ಗುಬ್ಬಿ ಪಶು ಆಹಾರ ಘಟಕಕ್ಕೆ ಮೆಕ್ಕೆಜೋಳವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಗೋಣಿಚೀಲದಲ್ಲಿ ಸರಬರಾಜು ಮಾಡಬೇಕು. ಮೆಕ್ಕೆಜೋಳವನ್ನು ಉತ್ತಮ ಸ್ಥಿತಿಯಲ್ಲಿರುವ 50 ಕೆಜಿ ಸಾಮರ್ಥ್ಯದ ಗೋಣಿಚೀಲದಲ್ಲಿ ಸರಬರಾಜು ಮಾಡಬೇಕು. ಪ್ಲಾಸ್ಟಿಕ್‌ ಚೀಲದಲ್ಲಿ ತರುವಂತಿಲ್ಲ. ಗೋಣಿಚೀಲದ ಹಣ ನೀಡಲಾಗುವುದಿಲ್ಲ. ಮೆಕ್ಕೆಜೋಳದ ಚೀಲದ ಮೇಲೆ ಮತ್ತು ಚೀಲದೊಳಗೆ ಕೀಟಾಣು ಮುಕ್ತವಾಗಿರಬೇಕು. ಸರಬರಾಜಾದ ಮತ್ತು ಮಾದರಿ ಮೆಕ್ಕೆಜೋಳದಲ್ಲಿ ಗುಣಮಟ್ಟದ ವ್ಯತ್ಯಾಸ ಕಂಡುಬಂದು ತಿರಸ್ಕೃತಗೊಂಡಲ್ಲಿ ಅದನ್ನು ಕಾರ್ಖಾನೆಯಿಂದ ಸಾಗಾಣಿಕೆ ಮಾಡುವ ಜವಾಬ್ದಾರಿ ಕೂಡ ರೈತರದ್ದಾಗಿರುತ್ತದೆ. ಮಾದರಿ ಅಂಗೀಕೃತಗೊಂಡಲ್ಲಿ ಘಟಕದಿಂದ ನಿಗದಿಪಡಿಸಿದ ದಿನಾಂಕದಂದೇ (ಸಂಜೆ 4 ಗಂಟೆ ಒಳಗೆ) ಖುದ್ದಾಗಿ ಮೆಕ್ಕೆಜೋಳವನ್ನು ಸುಸ್ಥಿತಿಯಲ್ಲಿ ಸರಬರಾಜು ಮಾಡಬೇಕಾಗುತ್ತದೆ. ರೈತರು ಸರಬರಾಜು ಮಾಡಿದ ಮೆಕ್ಕೆಜೋಳದ ಪ್ರಮಾಣಕ್ಕೆ ಸರಬರಾಜು ಮಾಡಿದ ಗರಿಷ್ಠ 20 ದಿನಗಳೊಳಗೆ ಸರ್ಕಾರದ ಡಿಬಿಟಿ ಪೋರ್ಟಲ್‌ ಮುಖಾಂತರ ಹಣ ಪಾವತಿಗೆ ಕ್ರಮ ವಹಿಸಲಾಗುತ್ತದೆ.

ಮೆಕ್ಕೆಜೋಳ ಮಾರಾಟ ಮಾಡಲು ಇಚ್ಛಿಸುವ ರೈತರು, ಪ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿ ಆಗಿರದಿದ್ದಲ್ಲಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ
ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಡಾ| ಎಂ.ಎಚ್‌. ರಾಜಪ್ಪ, ಮೊ: 7760980563, ಉಸ್ತುವಾರಿ ವ್ಯವಸ್ಥಾಪಕರು, ಹಾಲು ಉತ್ಪಾದಕರ ಸಂಘ ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next