Advertisement

ಕೃಷಿ ಕ್ಷೇತ್ರದ ಸುಧಾರಣೆ -ರೈತರ ಉನ್ನತಿ ಗುರಿ

06:26 PM Apr 19, 2022 | Team Udayavani |

ಹೊಳಲ್ಕೆರೆ: ಕೃಷಿ ಖಾತೆಯಲ್ಲಿ ಎಷ್ಟೇ ಕೆಲಸ ಮಾಡಿದರೂ ಜೈಕಾರಕ್ಕಿಂತ ಧಿಕ್ಕಾರವೇ ಹೆಚ್ಚು. ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನೇ ಅವಲಂಬಿಸಿದ್ದು. ಅವರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತಂದು ನಷ್ಟದಿಂದ ಮೇಲೆತ್ತುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನು ಸಚಿವನಾದ ನಂತರ ವಿಜ್ಞಾನಿಗಳು, ರೈತರು, ಉಪನ್ಯಾಸಕರು, ಚಿಂತಕರನ್ನು ಆಹ್ವಾನಿಸಿ ಸಂವಾದ ಸಭೆ ನಡೆಸಿದೆ. ರೈತರ ಅತ್ಮಹತ್ಯೆಗೆ ಕಾರಣ ಪತ್ತೆ ಬಗ್ಗೆ ಚಿಂತನೆ ನಡೆಸಿದಾಗ ಕೃಷಿ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಪರಿಹಾರವೇ ದಾರಿ ಎಂಬುದನ್ನು ಗಮನಿಸಿದೆ.

ರೈತರು ಒಂದು ಬೆಳೆಯನ್ನು ಅವಲಂಬಿಸದೆ ಸಮಗ್ರ ಕೃಷಿ ಪದ್ಧªತಿ ಅಳವಡಿಕೆಗೆ ಮುಂದಾಗಬೇಕು. ಸಮಗ್ರ ಕೃಷಿ ಪದ್ಧತಿಯಿಂದ ಕೋಲಾರ ಜಿಲ್ಲೆಯಲ್ಲಿ ರೈತರು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ. ಹಾಗಾಗಿ ಇಸ್ರೇಲ್‌ಗಿಂತ ಕೋಲಾರ ಮಾದರಿ ಕೃಷಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಹೊಳಲ್ಕೆರೆ ತಾಲೂಕಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಭಿವೃದ್ಧಿಗೆ 14 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ನಮ್ಮ ಸರಕಾರ ರೈತರ ಮಕ್ಕಳಿಗೆ ಬಿಎಸ್ಸಿ (ಅಗ್ರಿ) ಶಿಕ್ಷಣ ಪಡೆದುಕೊಳ್ಳಲು ಶೇ.50ರಷ್ಟು ಮೀಸಲು ನೀಡಿದೆ. ಕೃಷಿಕರ ಮಕ್ಕಳಿಗೆ ವಿದ್ಯಾನಿಧಿ  ವೇತನ ನೀಡುತ್ತಿದೆ. ಹೊಲ ಉಳುವ ಟ್ರ್ಯಾಕ್ಟರ್‌ ಡೀಸೆಲ್‌ ಅನುದಾದ ಸೌಲಭ್ಯ ಕಲ್ಪಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ 10 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಕೃಷಿಕರು ಸಮಗ್ರ ಕೃಷಿಯೊಂದಿಗೆ ಸರಕಾರಿ ಸೌಲಭ್ಯಗಳನ್ನೂ ಪಡೆದು ಅರ್ಥಿಕ ಮತ್ತು ಸಾಮಾಜಿಕವಾಗಿ ಪರಿಪೂರ್ಣ ಪ್ರಗತಿ ಸಾಧಿಸಬೇಕು ಎಂದು ಆಶಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭ-ನಷ್ಟಕ್ಕಿಂತ ಬಡವರಿಗೆ ಸೇವೆ ನೀಡುವ ಬಗ್ಗೆ ಯೋಚನೆ ಮಾಡಬೇಕು. ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಸರಕಾರಿ ಸಾರಿಗೆಯನ್ನು ಆಶ್ರಯಿಸಿದ್ದಾರೆ. ಶಿಕ್ಷಣಕ್ಕೆ ಸಾರಿಗೆ ಸೌಲಭ್ಯವೂ ಮುಖ್ಯ. ಹಾಗಾಗಿ ಸೇವೆಯೇ ಪ್ರಧಾನ ಗುರಿಯಾಗಿದ್ದು ಲಾಭ-ನಷ್ಟದ ಲೆಕ್ಕಾಚಾರಕ್ಕೆ ಇಲ್ಲಿ ಅಸ್ಪದವಿಲ್ಲ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ರಾಜಕೀಯ ಜೀವನದಲ್ಲಿ ಅಧಿಕಾರ ಶಾಶ್ವತವಲ್ಲ. ಅ ಧಿಕಾರಕ್ಕಾಗಿ ಅಭಿವೃದ್ಧಿ ಮಾಡುತ್ತಿಲ್ಲ. ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ಕೆಲಸ ಮಾಡುವ ಉದ್ದೇಶದಿಂದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಟೈರ್‌-ಟ್ಯೂಬ್‌ ಇಲ್ಲದೆ ಕಿತ್ತು ಹೋಗಿರುವ ರಸ್ತೆ ಸಾರಿಗೆ ನಿಗಮವನ್ನು ಬಿ.ಎಸ್‌. ಯಡಿಯೂರಪ್ಪ ನೀಡಿದ್ದಾರೆ. ಕಷ್ಟ ಕಾಲದಲ್ಲಿ ಜನರಿಗೆ ಉತ್ತಮ ಸೇವೆ ಕಲ್ಪಿಸಲು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಉಚಿತ ಪಾಸ್‌ ನೀಡಲಾಗಿದೆ. ಚಾಲಕ ಮತ್ತು ನಿರ್ವಾಹಕರ ವೇತನ ಹೆಚ್ಚಳ ಮಾಡುವ ಆಸೆ ಇದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವೆ ಎಂದರು.

ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರಿಗೆ ಇಲಾಖೆ ಸಂಕಷ್ಟದ ನಡುವೆಯೂಉತ್ತಮವಾಗಿ ಕೆಲಸ ಮಾಡುತ್ತಿದೆ. ಜನರು ಸಾರಿಗೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಬೆಳ್ಳಿ ಪದಕ ಪಡೆದ ಚಾಲಕರನ್ನು ಸನ್ಮಾನಿಲಾಯಿತು. ಹೊಸ ಬಸ್‌ ಮಾರ್ಗಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕರಾರಸಾ ವಿಭಾಗಿಯ ನಿಯಂತ್ರಣಾಧಿಕಾರಿ ಕೆ. ಸತ್ಯಸುಂದರಂ, ಪುರಸಭೆ ಅಧ್ಯಕ್ಷ ಆರ್‌.ಎ. ಅಶೋಕ್‌, ಉಪಾಧ್ಯಕ್ಷ ಕೆ.ಸಿ. ರಮೇಶ್‌, ಸದಸ್ಯರಾದ ಎಚ್‌.ಆರ್‌. ನಾಗರತ್ನ ವೇದಮೂರ್ತಿ, ಪಿ.ಆರ್‌. ಮಲ್ಲಿಕಾರ್ಜನ್‌, ಬಿ.ಎಸ್‌. ರುದ್ರಪ್ಪ, ಪಿ.ಎಚ್‌. ಮರುಗೇಶ್‌, ಸೈಯದ್‌ ಸಜೀಲ್‌, ಪೂರ್ಣಿಮಾ ಬಸವರಾಜ್‌, ಸುಧಾ ಬಸವರಾಜ್‌, ನಾಮನಿರ್ದೇಶಿತ ಸದಸ್ಯ ಕೆ.ಆರ್‌. ರಾಜಪ್ಪ, ಎಚ್‌. ಮಹೇಶ್‌, ಶೀಲಾ ಪ್ರವೀಣ್‌, ಅಲ್ತಾಫ್‌ ಹುಸೇನ್‌, ಆರ್‌. ಕವಿತಾ ರವಿ, ಪುರಸಭೆ ಮುಖ್ಯಾಧಿಕಾರಿ ಎ. ವಾಸಿಂ ಮೊದಲಾದವರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next