ಭರಮಸಾಗರ: ಚಿತ್ರದುರ್ಗ ನಡುವಿನ 29 ಕಿ.ಮೀ ಉದ್ದದ ರೈಲ್ವೇ ಭೂಸ್ವಾಧೀನ ಪ್ರಕ್ರಿಯೆ ಶೇ.90 ರಷ್ಟು ಮುಕ್ತಾಯಗೊಂಡಿದೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮತ್ತು ಕಾಮಗಾರಿಯ ಟೆಂಡೆರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರೈಲ್ವೇ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಶೀಘ್ರವೇ ರಾಜ್ಯದವರೇ ಆದ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಂದ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಂಸದ ಗೋವಿಂದ ಎಂ ಕಾರಜೋಳ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಾವಣಗೆರೆ ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆ ಜಿಲ್ಲೆಗೆ ಅಗತ್ಯವಾಗಿದೆ. ಯೋಜನೆಗೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಒಟ್ಟು 1210 ಎಕೆರೆ ಭೂಮಿ ಅವಶ್ಯಕವಾಗಿದೆ. ಇದರಲ್ಲಿ 1053 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು ರೈಲ್ವೇ ಇಲಾಖೆ ಗೆ ನೀಡಲಾಗಿದೆ. ಬಾಕಿ ಇರುವ 145 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಯೋಜನೆ ವಿಳಂಭವಾಗದಂತೆ ರೈಲ್ವೇ ಕಾಮಗಾರಿಗೆ ಅಗತ್ಯ ಇರುವ ಭೂಮಿ ಸ್ವಾಧೀನ ಹಾಗೂ ರೈಲ್ವೇ ಇಲಾಖೆಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಭೂಸ್ವಾಧೀನಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಭೂಸ್ವಾಧೀನಾಧಿಕಾರಿ ವಿವೇಕ್, ನೈರುತ್ಯ ರೈಲ್ವೇ ಮುಖ್ಯ ಇಂಜಿನಿಯರ್ ಪರದೀಪ್ ಪುರಿ, ಕಾರ್ಯಪಾಲಕ ಇಂಜಿನಿಯರ್ ರಜತ್ ತುನಹಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬಿ.ಪುರುಷೊತಮ್, ವಿಭಾಗೀಯ ಸಹಾಯಕ ಇಂಜಿನಿಯರ್ ನಿತ್ಯಾನಂತದ ಸ್ವಾಮಿ ಇದ್ದರು.