Advertisement

ಭಾರತೀಯ ಸೈನಿಕರ ಹತ್ಯೆಗೈದ ಚೀನಾ ವಿರುದ್ಧ ಆಕ್ರೋಶ

03:49 PM Jun 18, 2020 | Naveen |

ಚಿತ್ರದುರ್ಗ: ಭಾರತೀಯ ಸೈನಿಕರ ಮೇಲೆ ಆಕ್ರಮಣ ಮಾಡಿ ಮೂವರು ಸೈನಿಕರನ್ನು ಹತ್ಯೆ ಮಾಡಿದ ಚೀನಾ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಟಿ. ಬದರೀನಾಥ್‌ ಮಾತನಾಡಿ, ಚೀನಾ ದೇಶ ಹಿಂದಿನಿಂದಲೂ ಇದೇ ಕುತಂತ್ರ ಬುದ್ದಿ ಅನುಸರಿಸುತ್ತಿದೆ. ಶಾಂತಿ ಮಾತುಕತೆ ಆಡುತ್ತಲೇ ಬೆನ್ನ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡುತ್ತಿದೆ. 1962ರಲ್ಲಿ ನಡೆದ ಭಾರತ ಚೀನಾ ನಡುವಿನ ಯುದ್ಧದಲ್ಲಿ ನಾವು ಸೋತಿದ್ದೇವೆ. ಅದಕ್ಕೆ ಕಾರಣ ಅಂದಿನ ಆಡಳಿತ ವೈಖರಿ ಹಾಗೂ ನಮ್ಮ ಸೈನಿಕರಿಗೆ ಅಗತ್ಯ ಸೌಲಭ್ಯಗಳೇ ಇರಲಿಲ್ಲ. ಆದರೆ ಈಗ ಇರುವುದು ಮೋದಿ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜತೆಗಿದ್ದಾರೆ. ಇಡೀ ದೇಶದ ಜನತೆ ನಮ್ಮ ಸೇನೆಯ ಜತೆಗಿದ್ದೇವೆ. ಚೀನಾ 62ರಲ್ಲಿ ಮಾಡಿದ ಕುತಂತ್ರವನ್ನು ಮತ್ತೆ ಮುಂದುವರೆಸಿದರೆ ಅದಕ್ಕೆ ತಕ್ಕ ಶಾಸ್ತಿ ಆಗಿಯೇ ಆಗುತ್ತದೆ ಎಂದರು.

ಚೀನಾ ಸೈನಿಕರೊಂದಿಗೆ ನಡೆದ ಕಾದಾಟದಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಅವರಿಗಾಗಿ ಇಡೀ ದೇಶ ಮರುಗಿದೆ. ಜತೆಗೆ ಇಡೀ ಜಗತ್ತು ಕೋವಿಡ್ ಸಂಕಟದಲ್ಲಿರುವಾಗ ಚೀನಾ ಯುದ್ಧೋನ್ಮಾದ ತೋರಿಸುವುದು ಸರಿಯಲ್ಲ. ಭಾರತ ಯಾರ ಮೇಲೆಯೂ ಆಕ್ರಮಣ ಮಾಡುವುದಿಲ್ಲ. ಆದರೆ ಆಕ್ರಮಣ ಮಾಡಿದವರನ್ನು ಉಳಿಸುವುದಿಲ್ಲ ಎಂದು ಗುಡುಗಿದರು. ಚೀನಾ ವಿರುದ್ಧ ಇಡೀ ದೇಶ ಎಚ್ಚೆತ್ತುಕೊಳ್ಳಲು ಇದು ಸಕಾಲ. ಮೊದಲು ನಮ್ಮ ಮೊಬೈಲ್‌ಗ‌ಳಲ್ಲಿರುವ ಚೀನಾ ದೇಶದ ಆ್ಯಪ್ ಗಳನ್ನು ಡಿಲೀಟ್‌ ಮಾಡಬೇಕು. ಚೀನಾ ನಿರ್ಮಿತ ವಸ್ತುಗಳ ಬಳಕೆ, ಖರೀದಿಯನ್ನು ಈ ಕ್ಷಣದಿಂದಲೇ ಬಿಡುವುದೇ ನಾವು ಮಾಡುವ ಯುದ್ಧವಾಗಿದೆ. ಈ ಮೂಲಕ ನಮ್ಮ ದೇಶಭಕ್ತಿ ಪ್ರಕಟವಾಗಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ವಿಎಚ್‌ಪಿ ಅಧ್ಯಕ್ಷ ಸುರೇಶ್‌ಬಾಬು, ಬಜರಂಗದಳದ ವಿಭಾಗ ಸಂಚಾಲಕ ಪ್ರಭಂಜನ್‌, ಜಿಲ್ಲಾ ಸಂಚಾಲಕ ಸಂದೀಪ್‌, ಜಿಲ್ಲಾ ಗೋ ರಕ್ಷಾ ಪ್ರಮುಖ್‌ ಪಿ. ರುದ್ರೇಶ್‌, ನಗರ ಅಧ್ಯಕ್ಷ ಶ್ರೀನಿವಾಸ್‌, ಪ್ರಮುಖರಾದ ವಿಠ್ಠಲ್‌, ಶಶಿಧರ, ರಾಜೇಶ್‌, ಬಾನು, ಶಕ್ತಿ, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next