Advertisement

ವಿದ್ಯಾರ್ಥಿನಿಲಯ ಧರ್ಮಛತ್ರ ಅಲ್ಲ

12:02 PM Aug 07, 2019 | Naveen |

ಚಿತ್ರದುರ್ಗ: ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ಗೆ ಸೇರಿಸಿಕೊಳ್ಳಲು ವಿದ್ಯಾರ್ಥಿನಿಲಯಗಳು ಧರ್ಮಛತ್ರವಲ್ಲ. ಹೆಚ್ಚುವರಿ ಹಾಸ್ಟೆಲ್ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮಾಜಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯಕ್‌, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾಜಕಲ್ಯಾಣ ಇಲಾಖೆ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಲಯಗಳಿಗೆ ಮಂಜೂರಾದ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಲ್ಲ. ಹಾಸ್ಟೆಲ್ಗಳಿಗೆ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡರೆ ಕುಡಿಯುವ ನೀರು, ಶೌಚಾಲಯ, ಕೊಠಡಿ ಸೇರಿದಂತೆ ಬಹುತೇಕರು ಸೌಲಭ್ಯ ವಂಚಿತರಾಗುತ್ತಾರೆ. ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತದೆ ಎಂದು ಎಚ್ಚರಿಸಿದರು.

ಅವಶ್ಯಕತೆಗೆ ಅನುಗುಣವಾಗಿ ಹೊಸ ಹಾಸ್ಟೆಲ್ಗಳಿಗೆ ಮಂಜೂರಾತಿ ನೀಡಲಾಗುವುದು. ಅದನ್ನು ಬಿಟ್ಟು ಇರುವ ಹಾಸ್ಟೆಲ್ಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಸರಿಯಲ್ಲ. ಹಾಸ್ಟೆಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗಾಗಿಯೇ ವಿದ್ಯಾಸಿರಿಯಂತಹ ಯೋಜನೆಗಳಿವೆ. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳಿವೆ. ಜಿಪಂ ಸಿಇಒ ನಿಯಮಿತವಾಗಿ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಸಮಾಜಕಲ್ಯಾಣ ಇಲಾಖೆಯಲ್ಲಿ ನೌಕರರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌ ಗಮನಕ್ಕೆ ತಂದರು.

Advertisement

ಇದಕ್ಕೆ ಬೇಸರ ವ್ಯಕ್ತಪಡಿಸಿದ ಜಿ. ಕುಮಾರ್‌ ನಾಯಕ್‌, ಅನುದಾನಕ್ಕಾಗಿ ಸಾಕಷ್ಟು ಮುಂಚಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಅನುದಾನ ನೀಡುವ ಅವಧಿ ಮುಗಿದ ಬಳಿಕ ಪ್ರಸ್ತಾವನೆ ಸಲ್ಲಿಸುವುದು ಸರಿಯಲ್ಲ. ಅದೇ ರೀತಿ ಅಡುಗೆಯವರು ಹಾಗೂ ಅಡುಗೆ ಸಹಾಯಕರಿಗೂ ಕೂಡ ನಿಗದಿತ ಸಮಯಕ್ಕೆ ಸರಿಯಾಗಿ ವೇತನವನ್ನು ನೀಡಬೇಕು ಎಂದರು.

ವಿದ್ಯಾರ್ಥಿ ವೇತನ ಪಾವತಿಗೆ ಸಂಬಂಧಿಸಿದಂತೆ ಆಧಾರ್‌ನೊಂದಿಗೆ ಜೋಡಣೆಗೊಂಡಿರುವ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು. ಆದ್ದರಿಂದ ಶಾಲಾ ದಾಖಲಾತಿ ಸಂದರ್ಭದಲ್ಲಿಯೇ ಬ್ಯಾಂಕ್‌ ಖಾತೆಯ ವಿವರ ಪಡೆಯಬೇಕು ಎಂದು ಡಿಡಿಪಿಐಗೆ ತಿಳಿಸಿದರು.

ಜಿಲ್ಲೆಯಲ್ಲಿ ಖಾಸಗಿ ಕಟ್ಟಡದಲ್ಲೇ ಹಾಸ್ಟೆಲ್ ನಡೆಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿತಿ ಕೇಂದ್ರದವರು ಕಾಲಮಿತಿಯಲ್ಲಿ ಪೂರ್ಣಗೊಳಿಸಿಲ್ಲ. ಹೀಗಾಗಿ ಅನಗತ್ಯವಾಗಿ ಹಾಸ್ಟೆಲ್ಗಳಿಗೆ ಬಾಡಿಗೆ ಪಾವತಿ ಮಾಡಲಾಗುತ್ತಿದೆ. ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೆ ವಿಳಂಬ ಮಾಡಿದಲ್ಲಿ ಹಾಸ್ಟೆಲ್ ಕಟ್ಟಡದ ಬಾಡಿಗೆಯನ್ನು ಸಂಬಂಧಪಟ್ಟ ಸಂಸ್ಥೆಯವರೇ ಭರಿಸಬೇಕಾಗುತ್ತದೆ ಎಂದರು.

ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜು, ಜಿಲ್ಲೆಯಲ್ಲಿ ಒಟ್ಟು 42,985 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಸಿ. ಸತ್ಯಭಾಮ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರ್‌, ಡಿಡಿಪಿಐ ರೇವಣ್ಣಸಿದ್ದಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿ ವರ್ಷ ಬಿ.ಇಡಿ ತರಬೇತಿಗೆ ಸೇರುವ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಈ ವೇಳೆಗೆ ದಾಖಲಾತಿ ಪ್ರಕ್ರಿಯೆ ಮುಗಿದಿರುತ್ತದೆ. ಹಾಗಾಗಿ ಬಿ.ಇಡಿ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಸರ್ಕಾರದಿಂದ ಸೂಕ್ತ ಬಿ.ಇಡಿ ವಿದ್ಯಾರ್ಥಿಗಳಿಗೆ ಸೀಟು ಮೀಸಲಿಡಲು ಸೂಕ್ತ ನಿರ್ದೇಶನ ನೀಡಬೇಕು.
ಆರ್‌. ವಿನೋತ್‌ ಪ್ರಿಯಾ,
 ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next