ಚಿತ್ರದುರ್ಗ: ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಒಪಿ ಹಾಗೂ ರಾಸಾಯನಿಕ ಬಣ್ಣದಿಂದ ತಯಾರಾದ ಗಣಪತಿಗಳನ್ನು ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗೌರಿ ಗಣೇಶ ಹಬ್ಬದ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ತಯಾರಾಗಿ ಬರುವ ಪಿಒಪಿ ಗಣಪತಿ ಮೂರ್ತಿಗಳನ್ನು ಸಾಗಾಟ ಮಾಡದಂತೆ ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ಸರಕು ಸಾಗಣೆ ಹಾಗೂ ಇತರೆ ವಾಹನಗಳನ್ನು ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರು, ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಹಾಗೂ ವಿಸರ್ಜನೆ ಸಂದರ್ಭದಲ್ಲಿ ಹೂವು-ಹಣ್ಣು, ಬಾಳೆ ಕಂಬ, ಮಾವಿನ ತೋರಣಗಳ ಸಮೇತ ಮೂರ್ತಿಗಳನ್ನು ವಿಸರ್ಜನೆ ಮಾಡದೆ ಪ್ರತ್ಯೇಕವಾಗಿ ತೆಗೆದಿರಿಸಿ ವಿಲೇವಾರಿ ಮಾಡಬೇಕು ಎಂದರು.
ಡಿಜೆ ಬಳಕೆಗೆ ಅವಕಾಶ ಇಲ್ಲ: ಸುಪ್ರಿಂಕೋರ್ಟ್ ಆದೇಶದಂತೆ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕ, ಸ್ಪೀಕರ್ ಹಾಗೂ ಡಿಜೆ ಬಳಕೆಗೆ ನಿಷೇಧವಿದ್ದು, ಜಿಲ್ಲೆಯಲ್ಲಿಯೂ ಇದು ಪಾಲನೆ ಆಗಬೇಕು. ನಿಯಮಾನುಸಾರ 75 ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಬರುವ ಡಿಜೆ ಬಳಕೆಗೆ ಅವಕಾಶವಿಲ್ಲ. ಪರಿಸರ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಿಯಮ ಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡಿ, ನಗರದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ನಡೆಯುವುದರಿಂದ ಅಕ್ಕ ಪಕ್ಕದ ಜಿಲ್ಲೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡುವ ಅಗತ್ಯವಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.