Advertisement

ಉತ್ತಮ ಮಾವು ಫಸಲಿಗೆ ಮುಂಜಾಗ್ರತಾ ಕ್ರಮ ಅನುಸರಿಸಿ

11:47 AM Mar 16, 2020 | Naveen |

ಚಿತ್ರದುರ್ಗ: ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿರುವ ಮಾವು ಈ ವರ್ಷ ಉತ್ತಮವಾಗಿ ಫಸಲು ಹಿಡಿದಿದ್ದು, ಅದನ್ನು ಉಳಿಸಿಕೊಂಡು ಉತ್ತಮ ಫಸಲು ಪಡೆಯಲು ರೈತರು ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಲು ತೋಟಗಾರಿಕೆ ಇಲಾಖೆ ಸೂಚಿಸಿದೆ.

Advertisement

ಹಣ್ಣುಗಳ ರಾಜನೇ ಆಗಿರುವ ಮಾವನ್ನು ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಹೆಚ್ಚು ಬೆಳೆಯುತ್ತಿದ್ದು, ಸಾಕಷ್ಟು ರೈತರು ಇದನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2609.61 ಹೆಕ್ಟೇರ್‌ ಭೂಪ್ರದೇಶದಲ್ಲಿ ಮಾವಿನ ಬೆಳೆಯಿದ್ದು, ಹೊಳಲ್ಕೆರೆ 1354 ಹೆ., ಚಳ್ಳಕೆರೆ-247.75 ಹೆ., ಚಿತ್ರದುರ್ಗ-223 ಹೆ., ಹಿರಿಯೂರು-471.19 ಹೆ., ಹೊಸದುರ್ಗ-225.64 ಹೆ. ಹಾಗೂ ಮೊಳಕಾಲ್ಮುರು ತಾಲೂಕಿನಲ್ಲಿ 88 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾವು ಉಷ್ಣವಲಯದ ಬೆಳೆಯಾಗಿದ್ದು, ತೇವಾಂಶ ಹಾಗೂ ಒಣ ಹವೆಯಿಂದ ಕೂಡಿದ ಎರಡು ಸನ್ನಿವೇಶಗಳಲ್ಲೂ ಇದನ್ನು ಬೆಳೆಯಬಹುದು.

ಜಿಲ್ಲೆಯ ಪ್ರಮುಖ ಮಾವಿನ ತಳಿಗಳು: ಬಾದಾಮಿ, ರತ್ನಗಿರಿ, ರಸಪುರಿ, ತೋತಾಪುರಿ, ಮಲಗೋವಾ, ನೀಲಂ, ಬೆನ್‌ಶ್ಯಾನ್‌, ಮಲ್ಲಿಕಾ, ಸೇರಿದಂತೆ ವಿವಿಧ ತಳಿಯ ಮಾವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಾದಾಮಿ ಹೆಚ್ಚು ಜನಪ್ರಿಯವಾದ ಹಣ್ಣು. ಉತ್ಕೃಷ್ಟ ಗುಣಮಟ್ಟದ ಹಣ್ಣು ಕೊಡುವ ತಳಿಯಾಗಿದ್ದು, ದೇಶ, ವಿದೇಶಗಳಲ್ಲಿಯೂ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ತಳಿಯಾಗಿದೆ. ಸಾಧಾರಣ ಇಳುವರಿ ಮತ್ತು 2 ವರ್ಷಕ್ಕೊಮ್ಮೆ ಅಧಿಕ ಇಳುವರಿ ಕೊಡುವ ತಳಿ ಬಾದಾಮಿ.

ಎಚ್ಚರ ವಹಿಸಲು ಇದು ಸಕಾಲ: ಹೂ ಬಿಡುವ ಸಮಯದಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದಲ್ಲಿ ಬೂದಿರೋಗ ಹಾಗೂ ಜಿಗಿ ಹುಳುವಿನ ಹಾವಳಿಗೆ ಹೆಚ್ಚು ತುತ್ತಾಗುವ ಸಂಭವವಿರುತ್ತದೆ. ಸದ್ಯ ಜಿಲ್ಲೆಯಲ್ಲಿ ಮಾವಿನ ಮರಗಳು ಉತ್ತಮವಾಗಿ ಹೂ ಬಿಟ್ಟಿದ್ದು, ಕಾಯಿ ಕಟ್ಟುವ ಸಮಯ ಇದಾಗಿದೆ. ಹೀಗಾಗಿ ಮಾವು ಬೆಳೆಯ ಸಂರಕ್ಷಣೆಗಾಗಿ ರೈತರು ಮುಂದಾಗಬೇಕಿದೆ.

ಹೂ, ಮೊಗ್ಗು, ಅರಳಿದ ಹೂ, ತೆನೆ ಕಚ್ಚಿದ ಎಳೆಯ ಕಾಯಿಗಳನ್ನು ಮಾರಕ ರೋಗಗಳನ್ನು ರಕ್ಷಿಸುವುದು ಅತ್ಯಗತ್ಯ. ಜಿಗಿಹುಳು, ಹಣ್ಣಿನ ನೊಣ, ಓಟೆ ಕೊರಕ ಹುಳು, ಎಲೆಗಂಟು ಮಸಕ, ರೆಂಬೆಕುಡಿ ಕೊರಕ, ಹಿಟ್ಟು ತಿಗಣೆ, ಎಲೆ ತಿನ್ನುವ ಹುಳು, ಕೆಂಪು ಇರುವೆ, ಮೈಟ್‌ನುಸಿ, ಕಾಂಡಕೊರಕ ಹುಳು ಕೀಟಗಳು ಮಾವು ಬೆಳೆಗೆ ಹೆಚ್ಚು ಹಾನಿ ಮಾಡುತ್ತವೆ.

Advertisement

ಸಸ್ಯ ಸಂರಕ್ಷಣಾ ಕ್ರಮಗಳು: ಹೂವು ಬಿಡುವುದಕ್ಕಿಂತ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೆ ಮಾವಿನಲ್ಲಿ ಜಿಗಿಹುಳು ನಿಯಂತ್ರಣಕ್ಕಾಗಿ ಗಿಡಗಳಿಗೆ ನಾಲ್ಕು ಗ್ರಾಂ ಕಾರ್ಬಾರಿಲ್‌ + 2 ಮಿ.ಲೀ ಮೇಲಾಥೀಯನ್‌ + 0.25 ಮಿ.ಲೀ ಇಮೀಡಾ ಕ್ಲೋಪ್ರೀಡ್‌ ಇವುಗಳನ್ನು ಒಂದು ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೂವು ಬಿಟ್ಟಾಗ ಮತ್ತು ಪರಾಗಸ್ಪರ್ಶ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಕಾರಣ ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳಿಗೆ ಹಾಗೂ ಎಳೆಯ ಕಾಯಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಾಯಿಗಳು ಬೀಳದಂತೆ ನೋಡಿಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆ ಛೋಧಕ-ಎನ್‌ಎಎ-50 ಪಿಪಿಎಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಫಸಲನ್ನು ಹಣ್ಣಿನ ನೊಣದ ಭಾದೆಯಿಂದ ರಕ್ಷಿಸಲು ಹಣ್ಣಿನ ನೊಣದ ಮೋಹಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು.

ನೇರ ಮಾರುಕಟ್ಟೆಗೆ ಉತ್ತೇಜನ..
ಮಾವು ಬೆಳೆಗಾರರಿಂದ ನೇರವಾಗಿ ಮಾವು ಖರೀದಿಸಿ ರೈತ ಸಮುದಾಯವನ್ನು ಉತ್ತೇಜಿಸಲು ಆನ್‌ಲೈನ್‌ ನೇರ ಮಾರಾಟಕ್ಕೆ ಇಲಾಖೆಯು ಅವಕಾಶ ಒದಗಿಸಿದ್ದು, ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next