ಚಿತ್ರದುರ್ಗ: ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾಡುವುದು, ರೈತರನ್ನು ಕೊಲೆ ಮಾಡುವುದು ಎರಡೂ ಒಂದೇ. ಆದ್ದರಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್, ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ರೈತರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ಇಲ್ಲ. ಏಪ್ರಿಲ್ 1 ರಿಂದಲೇ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಬೇರೆ ಜಿಲ್ಲೆಗಳು ಸೇರಿದಂತೆ ಅಂತಾರಾಜ್ಯಗಳಿಗೂ ಸಾಗಾಟ ನಡೆಯುತ್ತಿದೆ. ರೈತರಿಗೆ ಬೇಕಾಗಿರುವ ಬಿತ್ತನೆ ಬೀಜ, ಕೃಷಿ ಪರಿಕರಗಳು, ಇದಕ್ಕೆ ಪೂರಕವಾದ ರಿಪೇರಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು ಯಾವುದೇ ಅಡೆತಡೆಗಳಿಲ್ಲ ಎಂದರು.
ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಯಾದ ಪ್ರದೇಶದಲ್ಲಿ ಸರ್ವೆ ಮಾಡಬೇಕು. ಜಿಲ್ಲೆಯಲ್ಲಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಯಾವ, ಯಾವ ಬೆಳೆ ಹಾನಿಯಾಗಿದೆ ಎನ್ನುವ ವಿವರವಾದ ವರದಿ ನೀಡಲು ಸೂಚಿಸಿದರು. ಜಂಟಿ ಕೃಷಿ ನಿರ್ದೇಶಕ ಸದಾಶಿವ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ 22 ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಯಂತ್ರಧಾರೆ ಕೇಂದ್ರಗಳು ತೆರೆದಿರುತ್ತವೆ. ಮುಂಗಾರು ಹಂಗಾಮಿಗೆ 87 ಸಾವಿರ ಮೆಟ್ರಿಕ್ ಟನ್ ಬಿತ್ತನೆ ಬೀಜ ನೀಡಲು ಗುರಿ ಹೊಂದಲಾಗಿದ್ದು ದೊಡ್ಡ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ರಾಗಿ ಸೇರಿದಂತೆ ಸಿರಿಧಾನ್ಯಗಳ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದೆ.
ಮುಂಗಾರು ಹಂಗಾಮಿಗೆ 53,371 ಮೆಟ್ರಿಕ್ ಟನ್ ರಸಗೊಬ್ಬರ ಬೇಕಾಗಿದ್ದು, 14,557 ಮೆಟ್ರಿಕ್ ಟನ್ ಕಾಪು ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಹೊಳಲ್ಕೆರೆ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮವಾಗಿ ಬೆಳೆ ಬಂದಿದ್ದು, ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಶಾಸಕ ಎಂ. ಚಂದ್ರಪ್ಪ, ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ಪಡಿತರ ವ್ಯವಸ್ಥೆಯ ವ್ಯಾಪ್ತಿಗೆ ಮೆಕ್ಕೆಜೋಳ ಬಾರದ ಕಾರಣ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಅವಕಾಶ ಇಲ್ಲ. ಆದರೂ ಸಹ ಗುಜರಾತ್, ರಾಜಸ್ಥಾನದಲ್ಲಿ ಮೆಕ್ಕೆಜೋಳ ಆಹಾರ ಪೂರೈಕೆ ಪಟ್ಟಿಯಲ್ಲಿದೆ ಎಂದು ಮಾಹಿತಿ ಇದ್ದು, ಇಲಾಖೆ ಕಾರ್ಯದರ್ಶಿಗಳ ಮೂಲಕ ಮಾಹಿತಿ ಪಡೆದು ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮಧುಗಿರಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಸಂಕಷ್ಟದಲ್ಲಿರುವ ಶೇಂಗಾ ಬೆಳೆಗಾರರಿಗಾಗಿ 2018 ರಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಶೇಂಗಾ ಬೆಳೆಗಾರರ ಪ್ಯಾಕೇಜ್ ಅನುಷ್ಠಾನ ಮಾಡುವಂತೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸಚಿವರ ಗಮನಕ್ಕೆ ತಂದರು.
ಹೊಳಲ್ಕೆರೆ ತಾಲೂಕಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕೇವಲ ಒಂದೂವರೆ ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಕೊಡುವ 1 ಗಂಟೆ ವಿದ್ಯುತ್ ಪೂರೈಕೆಯಲ್ಲಿ 10 ಬಾರಿ ವಿದ್ಯುತ್ ಸ್ಥಗಿತ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ, ಬೆಸ್ಕಾಂ ಅಧಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿ ಕಾರಿ, ಕೆಪಿಟಿಸಿಎಲ್ ಮಾರ್ಗದಲ್ಲಿ ಓವರ್ ಲೋಡ್ ಆಗುತ್ತಿರುವುದರಿಂದ ಕೇವಲ ಒಂದರಿಂದ ಒಂದೂವರೆ ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಎಸ್ಪಿ ಜಿ. ರಾಧಿಕಾ, ಜಿಪಂ ಸಿಇಒ ಹೊನ್ನಾಂಬ ಮತ್ತಿತರರು ಭಾಗವಹಿಸಿದ್ದರು.