ಚಿತ್ರದುರ್ಗ: ಲಾಕ್‌ಡೌನ್‌ನಿಂದ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್-19 ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ರೈತರು ಬಿತ್ತನೆಗೆ ಸಂಬಂ ಧಿಸಿದ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗಂತೆ ನೋಡಿಕೊಳ್ಳಲು ಸೂಚಿಸಿ ರೈತರು ಬೆಳೆದ ತೋಟಗಾರಿಕೆ ಬೆಳೆ, ಹಣ್ಣು, ತರಕಾರಿ, ಕೃಷಿ ಉತ್ಪನ್ನ ಮಾರಾಟಕ್ಕೆ ರೈತರಿಗೆ ಯಾವುದೇ ಅಡೆತಡೆಗಳಿಲ್ಲದಂತೆ ನೋಡಿಕೊಳ್ಳಬೇಕು.ತೋಟಗಾರಿಕೆ ಇಲಾಖೆಯಿಂದ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಅವರ ಜಮೀನಿನಿಂದಲೇ ಹಾಪ್‌ಕಾಮ್ಸ್ ಮೂಲಕ ಖರೀದಿ ಮಾಡಲು ವ್ಯವಸ್ಥೆ ಮಾಡಲು ತೋಟಗಾರಿಕೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಆನ್‌ಲೈನ್‌ನಲ್ಲಿಯೇ ಮಾರಾಟದ ವ್ಯವಸ್ಥೆ ಉತ್ತೇಜಿಸಲು ಸಹ ಸೂಚನೆ ನೀಡಿದರು.
71 ಕೋಟಿ ಪರಿಹಾರ; 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 52214 ರೈತರಿಗೆ 71.23 ಕೋಟಿ ವಿಮಾ ಪರಿಹಾರ ಬಂದಿದ್ದು ಜಿಲ್ಲೆಯ ರೈತರು ಸಂತಸಗೊಂಡಿದ್ದಾರೆ. ಇದು 2019ರ ಮುಂಗಾರು ಹಂಗಾಮಿನಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಬಾರದಿರುವುದರಿಂದ ಪ್ರಧಾನ ಬೆಳೆಗಳ ಬಿತ್ತನೆ ವಿಳಂಬವಾಗಿತ್ತು. ಬಿತ್ತನೆ ಸಮಯದಲ್ಲಿ ಮಳೆ ಬಾರದಿದ್ದಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ಶೇ.25ರಷ್ಟು ಪರಿಹಾರ ನೀಡಲು ಅವಕಾಶ ಇರುವುದರಿಂದ ವಿಮೆ ಮಾಡಿಸಿದ ಈ ಎಲ್ಲ ರೈತರಿಗೆ ಪರಿಹಾರ ಬಂದಿದೆ. ಕೆಲವು ರೈತರು ವಿಳಂಬವಾಗಿ ಬಿತ್ತನೆ ಮಾಡಿದ್ದರೂ ಸಹ ಉತ್ತಮ ಇಳುವರಿ ಬಂದಿದ್ದು ಪರಿಹಾರವನ್ನು ಪಡೆದುಕೊಂಡಿದ್ದಾರೆ ಎಂದರು.
ವಿಮಾ ಪರಿಹಾರದ ವಿವರ: ಚಳ್ಳಕೆರೆ 22,799 ರೈತರಿಗೆ 40.04 ಕೋಟಿ, ಚಿತ್ರದುರ್ಗ 7258 ರೈತರಿಗೆ 10.18 ಕೋಟಿ, ಹಿರಿಯೂರು 4251 ರೈತರಿಗೆ 7.03 ಕೋಟಿ, ಹೊಸದುರ್ಗ 10430 ರೈತರಿಗೆ 5.08 ಕೋಟಿ ಹಾಗೂ ಮೊಳಕಾಲ್ಮುರು ತಾಲೂಕಿನ 5839 ರೈತರಿಗೆ 8.87 ಕೋಟಿ ವಿಮಾ ಪರಿಹಾರ ಬಿಡುಗಡೆಯಾಗಿದೆ. ಇದಲ್ಲದೆ ಬಾಕಿ ಉಳಿದ 1637 ರೈತರಿಗೆ 2.15 ಕೋಟಿ ಬಿಡುಗಡೆಯಾಗಬೇಕಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಪಡೆದ ರೈತರೇ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಮಳೆಯಾಗದೆ ವಿಳಂಬವಾಗಿ ಬಿತ್ತನೆ ಮಾಡಿದ್ದರೂ ಸಹ ಉತ್ತಮ ಇಳುವರಿ ತೆಗೆದುಕೊಂಡಿದ್ದಾರೆ. ಆದರೆ ಫಸಲ್ ಬಿಮಾ ಯೋಜನೆಯಡಿ ನಿಗದಿತ ಬಿತ್ತನೆ ಅವ ಧಿಯಲ್ಲಿ ಮಳೆಯಾಗದಿದ್ದಲ್ಲಿ ಪರಿಹಾರ ನೀಡಬೇಕೆಂದು ಆದೇಶ ಇರುವುದರಿಂದ ಪರಿಹಾರ ಬಂದಿದೆ. ಆದ್ದರಿಂದ ಎಲ್ಲಾ ರೈತರು ಫಸಲ್ ಬಿಮಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ವಿಮಾ ಕಂತು ಪಾವತಿಸಿ ಎಂದು ಮನವಿ ಮಾಡಿದರು.
ಪಡಿತರ ಹಂಚಿಕೆಗೆ ಸೂಚನೆ; ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಆಹಾರಧಾನ್ಯ ಹಂಚಿಕೆ ನಿಗದಿತ ಅವಧಿಯಲ್ಲಿ ಕೈಗೊಳ್ಳಬೇಕು. ಕೆಲವು ಕಡೆ ಒಟಿಪಿ ಸಮಸ್ಯೆ ಇದೆ ಎಂದು ವಿಳಂಬವಾಗುತ್ತಿದೆ ಎಂಬ ದೂರುಗಳಿದ್ದು, ಇಂತಹ ದೂರುಗಳಿಗೆ ಅವಕಾಶ ಕೊಡದಂತೆ ಎಚ್ಚರವಹಿಸಲು ಸೂಚಿಸಿ ಒಟಿಪಿ ಇಲ್ಲದಿದ್ದರೂ ಪಡಿತರ ವಿತರಣೆಗೆ ಅವಕಾಶ ಇರುತ್ತದೆ. ಸರ್ಕಾರ ಈಗಾಗಲೇ ಕಾರ್ಡ್ ಇಲ್ಲದೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಣೆಗೆ ಕ್ರಮ ಕೈಗೊಂಡಿದ್ದು, ಯಾರಿಗೂ ಸಹ ಆಹಾರದ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಜಿಪಂ ಸಿಇಒ ಹೊನ್ನಾಂಬ, ಎಸ್ಪಿ ಜಿ.ರಾಧಿಕಾ, ಉಪವಿಭಾಗಾಧಿಕಾರಿ ಪ್ರಸನ್ನ, ಡಿಎಚ್‌ಒ ಡಾ| ಪಾಲಾಕ್ಷ ಮತ್ತಿತರರಿದ್ದರು.