Advertisement

ರಾಜಕೀಯ ವೈಭವೀಕರಣದಿಂದ ಪ್ರಗತಿ ಕುಂಠಿತ

03:32 PM Mar 02, 2020 | Naveen |

ಚಿತ್ರದುರ್ಗ: ಗ್ರಾಮೀಣ ಭಾಗದ ಒಂದೊಂದು ಮನೆಯಲ್ಲೂ ಮೂರ್‍ನಾಲ್ಕು ಪಕ್ಷ, ದ್ವೇಷ, ಅಸೂಯೆ, ಗಲಭೆ, ರಾಜಕಾರಣ ಹೆಚ್ಚಾಗಿದೆ. ಇಂತಹ ವ್ಯವಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ಕನಸಾಗಿಯೇ ಉಳಿದಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಎಚ್‌. ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

Advertisement

ಸರಸ್ವತಿ ವಿದ್ಯಾಸಂಸ್ಥೆ, ಸರಸ್ವತಿ ಕಾನೂನು ಕಾಲೇಜು ಹಾಗೂ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಸಂಯುಕ್ತಾಶ್ರಯದಲ್ಲಿ ಮಾ. 5 ರವರೆಗೆ ಹಳೇದ್ಯಾಮವ್ವನಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಹಳ್ಳಿಗಳಿಂದ ಕೂಡಿರುವ ದೇಶ. ವಿಪರ್ಯಾಸವೆಂದರೆ ಹಳ್ಳಿಗಳನ್ನು ನಗರೀಕರಣ ಮಾಡಲು ಹೊರಟಿದ್ದಾರೆ. ಗಾಂಧೀಜಿ ಚುನಾವಣೆಯೇ ಬೇಡ ಎಂದಿದ್ದರು. ರಾಜಕೀಯ ಚುನಾವಣೆಗಷ್ಟೇ ಇರಬೇಕು. ಚುನಾವಣೆ ಮುಗಿದ ನಂತರವೂ ಗ್ರಾಮಗಳಲ್ಲಿ ರಾಜಕೀಯ ಮಾಡಿಕೊಂಡು ಕಾಲ ಕಳೆಯುವುದಾದರೆ ಹಳ್ಳಿಗಳ ಉದ್ಧಾರ ಸಾಧ್ಯವಿಲ್ಲ. ಗ್ರಾಮದಲ್ಲಿ ಮುಖಂಡರೆಲ್ಲಾ ಸೇರಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆಡಳಿತ, ಸರ್ಕಾರ, ಸ್ವರಾಜ್ಯ ನಿಮ್ಮದಾಗಬೇಕು ಎನ್ನುವುದು ಗಾಂಧೀಜಿಯವರ ಕನಸಾಗಿತ್ತು ಎಂದರು.

ಗ್ರಾಮ ಸೇವಕರು ಹಾಗೂ ಶಿಕ್ಷಕರು ರಾಜಕಾರಣ ಮಾಡುತ್ತಿದ್ದಾರೆಂಬ ಅಪವಾದವಿದೆ. ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ಉದ್ಯೋಗ ಹುಡುಕಿಕೊಂಡು ಹಳ್ಳಿ ಯುವಕರು ದೊಡ್ಡ ದೊಡ್ಡ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರದಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯಾದರೆ ಸರ್ಕಾರ ಜನಜೀವನ ಬದಲಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳು ಸಾಕಷ್ಟಿವೆ. ಕೋಟ್ಯಂತರ ರೂ. ಅನುದಾನ ಬಿಡುಗಡೆಯಾಗುತ್ತಿದ್ದರೂ ಸದ್ಬಳಕೆಯಾಗುತ್ತಿಲ್ಲ.

ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ವಿಷಾದಿಸಿದರು. ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯೆ ಪ್ರೊ| ಎಂ.ಎಸ್‌.ಸುಧಾದೇವಿ ಮಾತನಾಡಿ, ಸೇವಾ ಮನೋಭಾವದಿಂದ
ಹಳ್ಳಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವುದು ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ದೇಶ. ಯುವಶಕ್ತಿಯೇ ದೇಶದ ಭರವಸೆಯಾಗಿರುವುದರಿಂದ ಐದು ವರ್ಷಗಳ ಕಾಲ ಕಷ್ಟಪಟ್ಟು ಓದಿದರೆ ಜೀವನ ಪರ್ಯಂತ ಸುಖವಾಗಿರಬಹುದು. ವಿದ್ಯಾರ್ಥಿ ದೆಸೆಯಲ್ಲಿ ಸೋಮಾರಿಗಳಾದರೆ ಜೀವನವಿಡಿ ಕಷ್ಟಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಹಿರಿಯ ಪತ್ರಕರ್ತ ಜಿ.ಎಸ್‌. ಉಜ್ಜಿನಪ್ಪ ಮಾತನಾಡಿದರು. ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ವೇಣುಗೋಪಾಲ್‌, ಜನ್ನಪ್ಪ, ಶಿಕ್ಷಕ ಹನುಮಂತಪ್ಪ, ಅಜ್ಜಪ್ಪ, ಜಿ.ಟಿ. ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next