ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ ಇದೇ ಮೈದಾನದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದೆ. ಇಂದು ಅದೇ ಮೈದಾನದಲ್ಲಿ ಗೌರವ ಸ್ವೀಕರಿಸುತ್ತಿದ್ದೇನೆ, ಇದು ನನ್ನ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದೆ, ಆಗ ಇಲ್ಲಿನ ಪೆರೇಡ್ ನಲ್ಲಿ ಅಧಿಕಾರಿಯಾಗಿ ಭಾಗವಹಿಸಿದ್ದೆ, ಈಗ ಸಚಿವನಾಗಿ ಭಾಗವಹಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಇಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾಗಲೇ ಚಿತ್ರರಂಗ ಪ್ರವೇಶಿಸಿ ಖಳನಾಯಕ, ನಾಯಕ ನಟನಾಗಿ ಈಗ ಮಂತ್ರಿಯಾಗಿದ್ದೇನೆ. ಇಂದು ತವರು ಮನೆಗೆ ಬಂದಷ್ಟು ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ:11,000 ಅಡಿ ಎತ್ತರ, ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಯೋಧರ ಗಣರಾಜ್ಯ ಸಂಭ್ರಮ: ವಿಡಿಯೋ
ಜಿಲ್ಲೆಯ ಮಣ್ಣಿನ ಗುಣ ಗೊತ್ತಿದೆ, ಇದು ಕೋಟೆ, ಕಲ್ಲುಗಳನ್ನು ಬಂಡೆಗಳ ನಾಡಾಗಿದ್ದರೂ ಇಲ್ಲಿನ ಜನರ ಹೃದಯ ಮೃದು. ನಮ್ಮ ಸರ್ಕಾರ ನೆಲ-ಜಲ-ಜನರ ರಕ್ಷಣೆಗೆ ಬದ್ಧವಾಗಿದೆ ಎಂದರು.
2023 ರಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಂತರ ರಾಜ್ಯಮಟ್ಟದ ಸಿರಿಧಾನ್ಯ ಮೇಳ ನಡೆಸಲಾಗುವುದು ಎಂದರು.