Advertisement

ಮೋದಿ ಪ್ರಚಾರ-ಸಂಘಟಿತ ಯತ್ನದಿಂದ ಗೆಲುವು: ನವೀನ್‌

05:11 PM May 24, 2019 | Naveen |

ಚಿತ್ರದುರ್ಗ: ಪ್ರಧಾನಿ ಮೋದಿ ಬಿಜೆಪಿ ಸಂಕಲ್ಪ ಯಾತ್ರೆಗೆ ಚಿತ್ರದುರ್ಗಕ್ಕೆ ಆಗಮಿಸಿ ಪ್ರಚಾರ ಮಾಡಿದ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಆನೆಕಲ್ ನಾರಾಯಣಸ್ವಾಮಿ ಗೆಲುವಿಗೆ ಹಾದಿ ಸುಗಮವಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಹೇಳಿದರು.

Advertisement

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಪರಿಶ್ರಮ, ಕ್ಷೇತ್ರದ ಮತದಾರರ ಆಶೀರ್ವಾದದಿಂದ ಗೆಲುವು ಸಾಧ್ಯವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಒಗ್ಗಟ್ಟು ಪ್ರದರ್ಶಿಸಿದರೂ ಜಿಲ್ಲೆಯ ಬಿಜೆಪಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್‌, ಪೂರ್ಣಿಮಾ ಶ್ರೀನಿವಾಸ್‌, ಬಿ. ಶ್ರೀರಾಮುಲು ಅವರ ಸತತ ಪರಿಶ್ರಮದ ಫಲವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿ ಪ್ರಧಾನಿ ಮೋದಿಗೆ ಕೊಡುಗೆ ನೀಡಲು ಸಾಧ್ಯವಾಯಿತು ಎಂದರು.

ಬಿಜೆಪಿ ಸಂಸದರು ಆಯ್ಕೆಯಾಗಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಚಿತ್ರದುರ್ಗ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ನಾರಾಯಣಸ್ವಾಮಿ ಕ್ಷೇತ್ರದ ಪ್ರಗತಿಗೆ ಗಮನ ನೀಡಲಿ ಎಂದು ಆಶಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯವರೇ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರೂ ನಮ್ಮ ನಿರೀಕ್ಷೆಗೆ ಮೀರಿ ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿಗೆ ಮತಗಳು ಬಂದಿವೆ. ಜೆಡಿಎಸ್‌- ಕಾಂಗ್ರೆಸ್‌ ಪ್ರಾಬಲ್ಯವಿರುವ ಶಿರಾ, ಪಾವಗಡದಲ್ಲೂ ಹೆಚ್ಚಿನ ಮತಗಳು ಸಿಕ್ಕಿವೆ. ಇದಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರ ಕಠಿಣ ಪರಿಶ್ರಮವೇ ಕಾರಣ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಗೆದ್ದೇ ಗೆಲ್ಲುತ್ತಾರೆಂಬ ದೃಢ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ನವರು, ನಮ್ಮ ಅಭ್ಯರ್ಥಿ ನಾರಾಯಣಸ್ವಾಮಿ ಮುನ್ನಡೆ ಸಾಧಿಸುತ್ತಿದ್ದಂತೆ ಒಬ್ಬೊಬ್ಬರಾಗಿಮತ ಎಣಿಕೆ ಕೇಂದ್ರದಿಂದ ಓಟ ಕಿತ್ತರು ಎಂದು ವ್ಯಂಗ್ಯವಾಡಿದರು. ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಡಾ| ಎ.ಎಚ್. ಶಿವಯೋಗಿಸ್ವಾಮಿ, ಜಿ.ಎಂ. ಸುರೇಶ್‌, ಟಿ.ಜಿ. ನರೇಂದ್ರನಾಥ್‌, ಸಿದ್ದೇಶ್‌ ಯಾದವ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್‌, ಮುರಳಿ, ರತ್ನಮ್ಮ, ಜೈಪಾಲ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌, ವಕ್ತಾರ ನಾಗರಾಜ್‌ ಬೇದ್ರೆ, ಸಂಪತ್‌ಕುಮಾರ್‌, ಜಿ.ಎಚ್. ಮೋಹನ್‌, ಶ್ಯಾಮಲಾ ಶಿವಪ್ರಕಾಶ್‌, ರೇಖಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next