Advertisement

ಕೈ ಕೋಟೆಯಲ್ಲಿ ಕಮಲ ಕಹಳೆ

12:58 PM May 24, 2019 | Naveen |

ಚಿತ್ರದುರ್ಗ: ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಅವರನ್ನು 80,178 ಮತಗಳ ಅಂತರದಿಂದ ಮಣಿಸಿದರು. ಈ ಮೂಲಕ ಕಾಂಗ್ರೆಸ್‌ ಭದ್ರಕೋಟೆ ಎನ್ನಿಸಿಕೊಂಡಿದ್ದ ಚಿತ್ರದುರ್ಗ ಎಸ್ಸಿ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದಾರೆ.

Advertisement

ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊಂಡ ಮತ ಎಣಿಕೆ ಕಾರ್ಯ, ಮಧ್ಯಾಹ್ನ ಸುಮಾರು 3 ಗಂಟೆಗೆ ಪೂರ್ಣಗೊಂಡಿತು. ಅಂಕಿ-ಅಂಶಗಳನ್ನು ಗಣಕೀಕೃತಗೊಳಿಸುವ ಕಾರ್ಯ ಸಂಜೆ 4 ಗಂಟೆ ಹೊತ್ತಿಗೆ ಮುಗಿಯಿತು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 17,60,111 ಮತದಾರರ ಪೈಕಿ 12,43,269 ಮತದಾರರು ಮತ ಚಲಾವಣೆ ಮಾಡಿದ್ದರು. ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ನಾರಾಯಣಸ್ವಾಮಿ ಮುನ್ನಡೆ ಸಾಧಿಸುತ್ತಲೇ ಸಾಗಿದರು. 22ನೇ ಸುತ್ತಿನವರೆಗೂ ಯಾವುದೇ ಏರಿಳಿತಗಳಿಗೆ ಅವಕಾಶ ಇಲ್ಲದಂತೆ ಮುನ್ನಡೆ ಕಾಯ್ದುಕೊಂಡರು. ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಅವರಿಗಿಂತ 3905, ಎರಡನೇ ಸುತ್ತಿನಲ್ಲಿ 9733, ಮೂರನೇ ಸುತ್ತಿನಲ್ಲಿ 15,115 ಮತಗಳ ಮುನ್ನಡೆ ಪಡೆದರು. ನಾಲ್ಕನೇ ಸುತ್ತಿನಲ್ಲಿ ಮುನ್ನಡೆಯ ಅಂತರ 15,971 ಮತಗಳಾಗಿದ್ದರೆ, ಐದನೇ ಸುತ್ತಿನಲ್ಲಿ ಈ ಅಂತರ 19,994 ಮತಗಳಿಗೆ ಏರಿತು.

ಆರನೇ ಸುತ್ತಿನಲ್ಲಿ 26,998, ಏಳನೇ ಸುತ್ತಿನಲ್ಲಿ 34,543, ಎಂಟನೇ ಸುತ್ತಿನಲ್ಲಿ 38,268 ಮತಗಳ ಮುನ್ನಡೆ ಸಾಧಿಸಿದ್ದರು. ಎಲ್ಲ ಸುತ್ತುಗಳಲ್ಲೂ ಏರು ಮುಖದಲ್ಲಿ ಸಾಗಿದ ನಾರಾಯಣಸ್ವಾಮಿ, 22ನೇ ಸುತ್ತಿನ ವೇಳೆಗೆ 6,26,195 ಮತಗಳನ್ನು ಪಡೆದರು. ಮೈತ್ರಿಕೂಟದ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ 5,46,017 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.

ವಿಧಾನಸಭಾ ಕ್ಷೇತ್ರಾವಾರು ಪಡೆದ ಮತ: ನೂತನ ಸಂಸದರಾಗಿ ಆಯ್ಕೆಯಾಗಿರುವ ಆನೇಕಲ್ ನಾರಾಯಣಸ್ವಾಮಿಯವರು ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಮತ್ತು ಶಿರಾ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರು. ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ಸೇರಿ ಮೂರು ಕ್ಷೇತ್ರಗಳು ಬಿ.ಎನ್‌. ಚಂದ್ರಪ್ಪ ಕೈ ಹಿಡಿದರೂ ಗೆಲುವಿಗೆ ಸಾಕಾಗಲಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್‌ ಲೀಡ್‌ ಪಡೆದುಕೊಂಡಿದ್ದರೆ, ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರೂ ಅಲ್ಲಿ ಬಿಜೆಪಿ ಲೀಡ್‌ ಪಡೆದುಕೊಂಡಿದೆ.

Advertisement

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 85,607, ಎ. ನಾರಾಯಣಸ್ವಾಮಿ 71,845 ಮತ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ 13,762 ಮತಗಳ ಮುನ್ನಡೆ ಸಿಕ್ಕಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 72,987, ಎ. ನಾರಾಯಣಸ್ವಾಮಿ 70,223 ಮತ ಪಡೆದಿದ್ದಾರೆ. ಚಂದ್ರಪ್ಪ ಅವರಿಗೆ 2764 ಅಲ್ಪ ಮತಗಳ ಮುನ್ನಡೆ ದೊರೆತಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 66,735 ಮತ ಪಡೆದುಕೊಂಡಿದ್ದರೆ, ಎ. ನಾರಾಯಣಸ್ವಾಮಿ 98,743 ಮತ ಗಳಿಸಿ 32,008 ಮತಗಳ ಭಾರೀ ಮುನ್ನಡೆ ಸಾಧಿಸಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 73,071, ಎ. ನಾರಾಯಣಸ್ವಾಮಿ 77,017 ಮತಗಳನ್ನು ಗಳಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮುನ್ನಡೆ 3946 ಮತಗಳಾಗಿವೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 50,121 ಮತಗಳನ್ನು ಪಡೆದರೆ, ಎ. ನಾರಾಯಣಸ್ವಾಮಿ 79,658 ಮತ ಪಡೆದು 29,537 ಮತಗಳ ಮುನ್ನಡೆ ಪಡೆದಿದ್ದಾರೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 59,398, ಎ. ನಾರಾಯಣಸ್ವಾಮಿ 97,480 ಮತಗಳನ್ನು ಗಳಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಸಿಕ್ಕ ಮುನ್ನಡೆ 38,082 ಮತಗಳಾಗಿವೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 67,937, ಎ. ನಾರಾಯಣಸ್ವಾಮಿ 79,503 ಮತ ಗಳಿಸಿದ್ದಾರೆ. ನಾರಾಯಣಸ್ವಾಮಿಗೆ 11,565 ಮತಗಳ ಮುನ್ನಡೆ ಸಿಕ್ಕಿದೆ. ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎನ್‌. ಚಂದ್ರಪ್ಪ 69,303, ಎ. ನಾರಾಯಣಸ್ವಾಮಿ 49,731 ಮತ ಗಳಿಸಿದ್ದಾರೆ. ಇಲ್ಲಿ ಚಂದ್ರಪ್ಪ ಅವರಿಗೆ 19,572 ಮತಗಳ ಮುನ್ನಡೆ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next