Advertisement

ಇನ್ನು ಸ್ಥಳೀಯ ಸಂಸ್ಥೆ ಚುನಾವಣೆ ಫೈಟ್

12:50 PM May 03, 2019 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಅವಧಿ ಮುಕ್ತಾಯಗೊಳ್ಳಲಿರುವ ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Advertisement

ಹಿರಿಯೂರು ನಗರಸಭೆಯ 31 ವಾರ್ಡ್‌ಗಳು, ಮೊಳಕಾಲ್ಮೂರು ಮತ್ತು ಹೊಳಲ್ಕೆರೆಯ ತಲಾ 16 ವಾರ್ಡ್‌ಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿಸಂಹಿತೆ ಜಾರಿಗೆ ಬಂದಿದೆ.

ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿ ಅನ್ವಯ ಮೇ 9 ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವರು. ಮೇ 9 ರಿಂದಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಮೇ 17 ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮೇ 20 ಕೊನೆಯ ದಿನವಾಗಿದೆ. ಮತದಾನ ಅಗತ್ಯವಿದ್ದಲ್ಲಿ ಮೇ 29 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯ ಸಂಬಂಧಪಟ್ಟ ತಾಲೂಕು ಕೇಂದ್ರದಲ್ಲಿ ಮೇ 31 ರಂದು ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಮೇ 31 ರೊಳಗಾಗಿ ಪೂರ್ಣಗೊಳ್ಳಲಿದೆ. ನೀತಿಸಂಹಿತೆ ಮೇ 31 ರವರೆಗೆ ಜಾರಿಯಲ್ಲಿರುತ್ತದೆ. ಚುನಾವಣೆ ಸಂಬಂಧ ಪ್ರತಿ ಅಭ್ಯರ್ಥಿಗೆ ನಗರಸಭೆ ಚುನಾವಣೆಗೆ 2 ಲಕ್ಷ ರೂ., ಪುರಸಭೆಗೆ 1.5 ಲಕ್ಷ ಹಾಗೂ ಪಟ್ಟಣ ಪಂಚಾಯತ್‌ಗೆ 1 ಲಕ್ಷ ರೂ. ವೆಚ್ಚ ಮಿತಿ ನಿಗದಿಪಡಿಸಲಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ನೋಟಾ ಬಳಕೆಗೆ ಅವಕಾಶವಿದೆ. ಒಂದೇ ಹೆಸರಿನ ವಿವಿಧ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಮತದಾರರಿಗೆ ಗೊಂದಲವಾಗದೇ ಇರಲು ಮತಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರವನ್ನು ಅಳವಡಿಸಲಾಗುವುದು. ಮತದಾರರು ಅಭ್ಯರ್ಥಿಯ ಪೂರ್ವಾಪರವನ್ನು ತಿಳಿದುಕೊಳ್ಳುವಂತಾಗಲು ಪ್ರತಿಯೊಬ್ಬ ಅಭ್ಯರ್ಥಿ ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರ ಮತ್ತು ಸ್ಥಿರಾಸ್ತಿ ವಿವರ, ಸ್ವವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಘೋಷಣಾಪತ್ರ, ಅಫಿಡವಿಟ್ ಮೂಲಕ ಸಲ್ಲಿಸಬೇಕಾಗುತ್ತದೆ. ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳಿಗೆ ಐಎಎಸ್‌ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ಹಾಗೂ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕರು ಮತ್ತು ಉಪನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕನ್ನಾಗಿ ನೇಮಿಸಲಾಗುವುದು. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಲಾಗುವುದು. ಈ ದಿಸೆಯಲ್ಲಿ ಎಲ್ಲ ಸಾರ್ವಜನಿಕರು, ಮತದಾರರು, ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next