ಚಿತ್ರದುರ್ಗ: ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಡಿ ಗ್ರೂಪ್ ಹಾಗೂ ನಾನ್ ಕ್ಲಿನಿಕಲ್ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿವೆ ಎಂದು ಮಂಗಳವಾರ ಜಿಲ್ಲಾಕಾರಿ ಕಚೇರಿ ಎದುರು ಸಿಬ್ಬಂದಿ ಅಳಲು ವ್ಯಕ್ತಪಡಿಸಿದರು.
ಫೆ. 1 ರಿಂದ ಗುತ್ತಿಗೆ ನೌಕರರನ್ನು ವಜಾಗೊಳಿಸಿದ್ದೇವೆ ಎಂದು ಖಾಸಗಿ ಏಜೆನ್ಸಿಯವರು ಪತ್ರದ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲಾಸ್ಪತ್ರೆಗೆ ವಾಸ್ತವ್ಯಕ್ಕಾಗಿ ಆಗಮಿಸಿದ್ದಾಗ ಮನವಿ ಸಲ್ಲಿಸಿದ್ದೆವು. ಇದಕ್ಕೆ ಸ್ಪಂದಿಸಿದ್ದ ಸಚಿವರು ಯಾರನ್ನೂ ಕೆಲಸದಿಂದ ತೆಗೆದು ಹಾಕದೆ ಮುಂದುವರೆಸಲು ಸೂಚಿಸುತ್ತೇನೆ ಎಂದಿದ್ದರು. ಆದರೆ ಮರುದಿನ ಕೆಲಸಕ್ಕೆ ಹೋದರೆ ಆದೇಶ ಪತ್ರ ತನ್ನಿ ಎನ್ನುತ್ತಿದ್ದಾರೆ ಎಂದು ದುಃಖ ತೋಡಿಕೊಂಡರು.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಮುಂದುವರಿಸಿದ್ದಾರೆ. ಆದರೆ ಇತರೆ ಆಸ್ಪತ್ರೆಗಳಲ್ಲಿರುವವರನ್ನು ಬಿಟ್ಟುಕೊಳ್ಳುತ್ತಿಲ್ಲ. 600 ರೂ.ಗಳಿಂದ 10 ಸಾವಿರ ರೂ. ವೇತನ ಸಿಗುವವರೆಗೆ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಏಕಾಏಕಿ ತೆಗೆದು ಹಾಕಿದರೆ ನಮ್ಮ ಬದುಕು ಹೇಗೆ ಎಂದು ಪ್ರಶ್ನಿಸಿದರು.
ಸಮಸ್ಯೆ ಆಲಿಸದ ಜಿಲ್ಲಾಧಿಕಾರಿ: ಕೆಲಸ ಕಳೆದುಕೊಂಡ ಸುಮಾರು 20 ಮಂದಿ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು ಎರಡು ತಾಸು ಜಿಲ್ಲಾಧಿಕಾರಿಗಳಿಗಾಗಿ ಕಾಯುತ್ತಿದ್ದರು. ಅಷ್ಟರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸುಮಾರು ಒಂದು ತಾಸು ಸಭೆ ನಡೆಸಿದರು. ಇಷ್ಟೆಲ್ಲಾ ಮುಗಿಯುವವರೆಗೆ ಕಾದು ಕುಳಿತಿದ್ದವರು ಸಭೆ ಮುಗಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೊರ ಬರುತ್ತಿದ್ದಂತೆ ಮನವಿ ಪತ್ರಗಳನ್ನು ಹಿಡಿದು ನಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ, ಸಚಿವರು ಮುಂದುವರಿಸುವಂತೆ ಸೂಚಿಸಿದ್ದಾರೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡರು. ಆದರೆ ಜಿಲ್ಲಾಧಿಕಾರಿ ಮಾತ್ರ ಯಾವುದನ್ನೂ ಕೇಳಿಸಿಕೊಳ್ಳದೇ ತಮ್ಮ ಕಚೇರಿಗೆ ತೆರಳಿದರು. ಇದರಿಂದ ಬೇಸರಗೊಂಡ “ಡಿ’ ಗ್ರೂಪ್ ಸಿಬ್ಬಂದಿಗಳು ನಮ್ಮ ನೋವನ್ನು ಯಾರ ಮುಂದೆ ಹೇಳಿಕೊಳ್ಳಬೇಕು. ಬೆಂಗಳೂರಿಗೆ ಹೋಗಿ ಪ್ರತಿಭಟಿಸುತ್ತೇವೆ ಎಂದರು.
ಹಿರಿಯೂರು ತಾಲೂಕು ಧರ್ಮಪುರ, ಮರಡಿಹಳ್ಳಿ, ಚಳ್ಳಕೆರೆ ತಾಲೂಕಿನ ಪರಶುರಾಮಪುರ, ನಾಯಕನಹಟ್ಟಿ, ಚಳ್ಳಕೆರೆ, ಮೊಳಕಾಲ್ಮೂರು ಸೇರಿದಂತೆ ವಿವಿಧ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದ ಸಿಬ್ಬಂದಿ ಭಾಗವಹಿಸಿದ್ದರು.