ಚಿತ್ರದುರ್ಗ: ಯೋಗವೆಂದರೆ ಆರೋಗ್ಯ ಸುಧಾರಣೆಗೆ ಮಾಡುವಂತಹ ಅಂಗ ಸಾಧನೆ ಮಾತ್ರವಲ್ಲ, ಮಾನವ ಸತ್ಯ ಶುದ್ಧನಾಗಿ ಸನ್ಮಾರ್ಗದಲ್ಲಿ ಜೀವನ ನಡೆಸುವುದು, ಮನುಷ್ಯ ತನ್ನ ಬಾಳಿನ ಉದ್ದೇಶವನ್ನರಿತು ಬಾಳುವುದು ಎಂದರ್ಥ ಎಂದು ನಿವೃತ್ತ ಶಿಕ್ಷಕ ನಂದಪ್ಪ ಮಾಸ್ಟರ್ ಹೇಳಿದರು.
ಮಾನವ ದೇಹ ದೇಗುಲವಿದ್ದಂತೆ. ಅದು ದೇವತಾ ಶಕ್ತಿಗಳ ಸಣ್ಣ ದೇವಸ್ಥಾನ. ಯಾವುದು ಬ್ರಹ್ಮಾಂಡದಲ್ಲಿದೆಯೋ ಅದು ದೇಹವೆಂಬ ಪಿಂಡಾಂಡದಲ್ಲಿ ನೆಲೆ ನಿಂತಿದೆ. ದೇಹದ ನರಮಂಡಲಗಳು ವಿಶಿಷ್ಟ ಶಕ್ತಿಯ ಕೇಂದ್ರಗಳಾಗಿದ್ದು ಇವುಗಳನ್ನೇ ನಾಡಿಗಳೆಂದು ಕರೆಯುವುದುಂಟು. ಈ ನರನಾಡಿಗಳನ್ನು ಸರಿಯಾದ ಉಸಿರಾಟ ಕ್ರಿಯೆಯ ಮೂಲಕ ಹತೋಟಿಯಲ್ಲಿಡಲು ಯೋಗ ಭಾಷೆಯಲ್ಲಿ ಪ್ರಾಣಾಯಾಮ ಎನ್ನುತ್ತೇವೆ ಎಂದರು.
ಹೊಸದುರ್ಗದ ಪ್ರಾಧ್ಯಾಪಕ ಹಾಗೂ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶ್ರೀನಿವಾಸ ಯೋಗ ಮತ್ತು ಆಯುರ್ವೇದ ವಿಷಯದ ಕುರಿತು ಮಾತನಾಡಿ, ಮನುಷ್ಯನ ಆಯುಷ್ಯದ ಹಿತ ಅಹಿತ, ಸುಖ ದುಃಖಗಳ ವಿವೇಚನೆ, ರೋಗ ಮತ್ತು ಶಮನ ಯಾವುದರಲ್ಲಿ ಹೇಳಲ್ಪಟ್ಟಿದೆಯೊ ಅದನ್ನೇ ವಿದ್ವಾಂಸರು ಆಯುರ್ವೇದವೆಂದು ಹೇಳುತ್ತಾರೆ ಎಂದು ತಿಳಿಸಿದರು. ಯೋಗ ಶಿಕ್ಷಕ ಎಲ್.ಎಸ್. ಬಸವರಾಜ್ ಮಾತನಾಡಿ, ವಿದ್ಯಾನಗರ ಬಡಾವಣೆಯ ನಾಗರಿಕರಿಗಾಗಿ ಉಚಿತ ಯೋಗ ತರಬೇತಿ ಶಾಖೆ ಪ್ರಾರಂಭಿಸಲು ಪ್ರಸ್ತಾಪಿಸಿದಾಗ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಿಪರ್ಯಾಸವೆಂದರೆ ಈ ಯೋಗ ಶಾಲೆಯ ಲಾಭ ಪಡೆಯುವಲ್ಲಿ ಜನರು ಹಿಂದುಳಿದಿದ್ದಾರೆ. ನಾವು ಯಾವುದೇ ಸೌಲಭ್ಯಗಳನ್ನು ಉಚಿತವಾಗಿ ನೀಡಿದಾಗ ಅದರ ಬಗ್ಗೆ ಜನರು ಅಸಡ್ಡೆ ತೋರುತ್ತಾರೆ ಎಂದು ವಿಷಾದಿಸಿದರು.
ಭರಮಸಾಗರದ ಯೋಗ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಗುರು-ಶಿಷ್ಯ ಪರಂಪರೆ ಹಿಂದೂಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಕಾಲದ ಪ್ರವಾಹದಲ್ಲಿ ಅನ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ನಗರದ ವಿದ್ಯಾನಗರ ಪತಂಜಲಿ ಯೋಗ ಸಮಿತಿ ಹಾಗೂ ವಿದ್ಯಾನಗರ ಬಡಾವಣೆಯ ನಾಗರಿಕರ ಸಂಯುಕ್ತಾಶ್ರಯದಲ್ಲಿ ಬಡಾವಣೆಯ ವಿದ್ಯಾವಾಹಿನಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಯೋಗ ಗುರು ರವಿ ಕೆ. ಅಂಬೇಕರ್, ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಯೋಗ ಶಿಕ್ಷಕ ಬಸವರಾಜ್, ಭರಮಸಾರ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ಜಿ.ವೈ. ಸುರೇಶ್, ಖಜಾಂಚಿ ವೀಣಾ, ಉಪಾಧ್ಯಕ್ಷೆ ಡಾ| ಹರಿಣಿ, ಕಾರ್ಯದರ್ಶಿ ಶೈಲಾ, ಸದಸ್ಯರಾದ ರೇಖಾ, ಲಲಿತಮ್ಮ, ವೈಶಾಖ, ಶ್ರುತಿ ಇತರರು ಇದ್ದರು.
ಸದೃಢ ದೇಹಕ್ಕೆ ವ್ಯಾಯಾಮ ಅತ್ಯಗತ್ಯ: ರವಿ ಅಂಬೇಕರ್
ಪ್ರತಿಯೊಬ್ಬರೂ ವ್ಯಾಯಾಮ ಮಾಡಬೇಕು. ಶರೀರಕ್ಕೆ ಬಲ ನೀಡುವ ತುಪ್ಪ, ಬಾದಾಮಿ, ಹಾಲು ಇವುಗಳ ಸಾರ ವ್ಯಾಯಾಮದಿಂದ ರಕ್ತದಲ್ಲಿ ಸೇರುತ್ತದೆ. ವ್ಯಾಯಾಮ ಮಾಡದಿದ್ದರೆ ಈ ವಸ್ತುಗಳು ಕ್ರಮೇಣ ಬೊಜ್ಜಾಗಿ ಪರಿವರ್ತನೆಗೊಳ್ಳುತ್ತವೆ. ವ್ಯಾಯಾಮ ಪುಷ್ಟಿಕರವಾದ ಪದಾರ್ಥಗಳನ್ನು ಜೀರ್ಣಗೊಳಿಸಿ ಅವುಗಳ ನಿಜವಾದ ಸತ್ವವನ್ನು ರಕ್ತಗತವನ್ನಾಗಿ ಮಾಡಿ ಶರೀರವನ್ನು ಶಕ್ತಿಯ ಭಂಡಾರವನ್ನಾಗಿ, ಸೌಂದರ್ಯದ ನಿಧಿಯಾಗಿ ಮಾಡುತ್ತದೆ. ಯೋಗ ಮಾನವನ ಆಲಸ್ಯ ಹೋಗಲಾಡಿಸಿ ಶಾರೀರಿಕ, ಮಾನಸಿಕ, ಬಲ ಸಂವರ್ಧನೆ ಮಾಡುತ್ತದೆ. ಜನರು ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಜಗಿದು ತಿನ್ನಬೇಕು. ಆಗ ನಮಗೆ ಯಾವುದೇ ರೀತಿಯ ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ ಎಂದು ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ತಿಳಿಸಿದರು.