Advertisement

ಸಮಾಜದಲ್ಲಿ ಗುರುವಿನ ಸ್ಥಾನ ದೊಡ್ಡದು

11:34 AM Jul 17, 2019 | Naveen |

ಚಿತ್ರದುರ್ಗ: ಗುರು ಸಮಾಜದ ಪರಿವರ್ತಕ. ಹಾಗಾಗಿ ಗುರುವಿಗೆ ಎಲ್ಲರಿಗಿಂತ ಹೆಚ್ಚಿನ ಮಹತ್ವವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌. ನಾಗಭೂಷಣ ಹೇಳಿದರು.

Advertisement

ನಗರದ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ರೋಟರಿ ಕ್ಲಬ್‌ ಚಿತ್ರದುರ್ಗ ಫೋರ್ಟ್‌, ರೋಟರಿ, ಇನ್ನರ್‌ವ್ಹೀಲ್ ಕ್ಲಬ್‌ ಚಿತ್ರದುರ್ಗ ಫೋರ್ಟ್‌, ಸಂಸ್ಕಾರ ಭಾರತಿ ಹಾಗೂ ವಾಸವಿ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜನನಿಯೇ ಮೊದಲು ಗುರು. ಗುರುವಿನ ಮಾರ್ಗದರ್ಶನ, ಶ್ರೀರಕ್ಷೆ ಇದ್ದರೆ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಗುರುವಿನ ಮಾರ್ಗದರ್ಶನ ಲಭ್ಯವಾಗದಿದ್ದಲ್ಲಿ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುವ ಸಾಧ್ಯತೆ ಇದೆ. ಪುರಾಣ ಕಾಲದಿಂದಲೂ ಗುರುವಿನ ಸ್ಥಾನ ದೊಡ್ಡದು ಎಂದರು.

ಸಮಾಜವನ್ನು ವೈರುಧ್ಯತೆ, ಸಮಸ್ಯೆಗಳು ಕಾಡುತ್ತಿವೆ ಹಾಗಾಗಿ ಶಾಲೆಗಳಲ್ಲಿ ಪುಸ್ತಕ ಜ್ಞಾನದ ಜತೆಗೆ ಭಾರತೀಯ ಸಂಸ್ಕೃತಿಯನ್ನೂ ಕಲಿಸಿಕೊಡಬೇಕು. ಶಿಕ್ಷಕರು ತಮ್ಮ ವೃತ್ತಿ ಗೌರವವನ್ನು ಎತ್ತಿ ಹಿಡಿಯಬೇಕು. ಶಿಕ್ಷಕರ ಮುಂದೆ ಸಾಕಷ್ಟು ಸವಾಲುಗಳಿವೆ. 21ನೇ ಶತಮಾನದಲ್ಲಿ ಶಿಕ್ಷಕರ ವೃತ್ತಿ ಸವಾಲಾಗಿ ರೂಪುಗೊಳ್ಳುತ್ತಿದೆ. ಜ್ಞಾನ ವಲಯ ಪುಸ್ತಕಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಇದರಿಂದ ಮಕ್ಕಳು ಪರಿಪೂರ್ಣ ಜ್ಞಾನ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಪಠ್ಯ, ಪಠ್ಯೇತರ ಸೇರಿದಂತೆ ಜೀವನ ಮೌಲ್ಯಗಳನ್ನೂ ಕಲಿಸಬೇಕು ಎಂ ದು ಕರೆ ನೀಡಿದರು.

ಹೊಸದುರ್ಗ ಜೀವವಿಮಾ ನಿಗಮದ ಅಧಿಕಾರಿ ನವೀನ್‌ಕುಮಾರ್‌ ಉಪನ್ಯಾಸ ನೀಡಿ, ಸಮಾಜದಲ್ಲಿ ಬಹಳಷ್ಟು ದಿನಗಳಿಂದ ತಳಮಳ ಅನುಭವಿಸುತ್ತಾ ಬಂದಿದ್ದೇವೆ. ಹಾಗಾಗಿ ಕತ್ತಲನ್ನು ತೊಳೆದು ಬೆಳಕನ್ನು ಹಚ್ಚುವ ಗುರುವಿನ ಮಾರ್ಗದರ್ಶನದಲ್ಲಿ ಸಾಗಬೇಕಿದೆ. ದೇವರು ನಮ್ಮೆಲ್ಲರ ಹೃದಯದಲ್ಲಿ ಜ್ಞಾನದ ದೀಪವನ್ನು ಹಚ್ಚಿ ಕಳುಹಿಸಿದ್ದಾರೆ. ದೇವರು ಹಚ್ಚಿದ ದೀಪ ನಮ್ಮ ಪ್ರಗತಿ, ಸಂಸ್ಕೃತಿಯ ಸಂಕೇತ. ಆದರೆ ಇಂದು ಕೈಹಿಡಿದು ನಡೆಸುವವರ ಕೊರತೆ ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು.

Advertisement

ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ಸಿಕ್ಕಿದೆ. ಗುರು ಪೂರ್ಣಿಮೆಯನ್ನು ಬಹು ದೊಡ್ಡ ಉತ್ಸವವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪ್ರಪಂಚ ಕಂಡ ಅದ್ಭುತ ಗುರು ಗೌತಮ ಬುದ್ಧ. ಅವರು ಮೊದಲ ಉಪದೇಶ ನೀಡಿದ್ದು, ತಪಸ್ಸಿಗೆ ಹೊರಟಿದ್ದು ಇದೇ ದಿನ. ಶ್ರದ್ಧೆ,

ಭಕ್ತಿ, ಪ್ರೀತಿಯಿಂದ ಹಚ್ಚಿದ ದೀಪ ಯಾವತ್ತೂ ಆರುವುದಿಲ್ಲ, ನಿಸ್ವಾರ್ಥ ಇರದ, ಧನದಾಹ ಇಲ್ಲದೇ ತಮ್ಮಲ್ಲಿನ ಜ್ಞಾನವನ್ನು ಹಂಚುವವನೇ ನಿಜವಾದ ಗುರು. ಮಹಾಭಾರತ ರಚಿಸಿದ ವೇದವ್ಯಾಸ ಈ ಜಗತ್ತು ಕಂಡ ಮೊದಲ ಸಂಪಾದಕ. ಅವರ ಜನ್ಮದಿನವನ್ನು ಗುರು ಪೂರ್ಣಿಮೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜಾನಪದ ಗಾಯಕ ಕಾಲ್ಕೆರೆ ಚಂದ್ರಪ್ಪ, ನಿವೃತ್ತ ಮುಖ್ಯಶಿಕ್ಷಕ ಎಂ.ಎನ್‌. ಸತ್ಯಮೂರ್ತಿ, ಯೋಗ ಗುರು ಚಂದ್ರಶೇಖರ ಮೇಟಿ, ರಂಗ ಕಲಾವಿದ ಎಸ್‌.ಬಿ. ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಪಿ.ಎಲ್. ಸುರೇಶ್‌ರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಮಲಿಂಗ ಶ್ರೇಷ್ಠಿ, ರೋಟರಿ ಕ್ಲಬ್‌ ಅಧ್ಯಕ್ಷ ಕೆ.ಎನ್‌. ನಾಗೇಂದ್ರಬಾಬು, ಇನ್ನರ್‌ ವ್ಹೀಲ್ ಕ್ಲಬ್‌ ಅಧ್ಯಕ್ಷೆ ಸುನೀತಾ ಗುಪ್ತ, ಸಂಸ್ಕಾರ ಭಾರತಿ ಅಧ್ಯಕ್ಷ ಟಿ.ಕೆ. ನಾಗರಾಜ್‌, ರಾಜೀವಲೋಚನ, ಮಾರುತಿ ಮೋಹನ್‌, ವಾಸವಿ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ಗೋಪಾಲಕೃಷ್ಣ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next