ಬೆಂಗಳೂರು: ಕಾರಿನಲ್ಲಿ ಬೆಂಗಳೂರಿಗೆ ಬಂದು ಜಾತ್ರಾ ಮಹೋತ್ಸವಗಳ ಸಂದರ್ಭದಲ್ಲಿ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ಕದಿಯುತ್ತಿದ್ದ ನಾಲ್ವರ ತಂಡವನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಚಿತ್ರದುರ್ಗದ ಬಾಬೂಸಾಬ್ (45), ಹುಸೇನ್ ಬೀ (52), ದಾದಾಪೀರ್ (32), ಗುಲಾಬ್ (40) ಬಂಧಿತರು. ಆರೋಪಿಗಳ ಬಂಧನದಿಂದ 6 ಪ್ರಕರಣಗಳು ಪತ್ತೆಯಾಗಿದ್ದು, 11 ಲಕ್ಷ ರೂ. ಬೆಲೆಬಾಳುವ ಒಟ್ಟು 174 ಗ್ರಾಂ ಚಿನ್ನದ ಸರಗಳನ್ನು ಮತ್ತು ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ವರು ಆರೋಪಿಗಳು ಚಿತ್ರದುರ್ಗದಿಂದ ತಮ್ಮ ಕಾರಿನಲ್ಲಿ ಬೆಂಗಳೂರು ಸೇರಿ ಊರೂರು ಅಲೆಯುತ್ತಿದ್ದರು. ಅಲ್ಲಿರುವ ಜಾತ್ರಾ ಮಹೋತ್ಸವ, ಜನ ಸಂದಣಿ ಹೆಚ್ಚು ಸೇರುವ ಕಡೆ ಓಡಾಡಿ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿ ಅವರ ಕತ್ತಿನಲ್ಲಿರುವ ಚಿನ್ನದ ಸರ ಲಪಟಾಯಿಸುತ್ತಿದ್ದರು. ನಂತರ ಅದನ್ನು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ನಾಲ್ವರೂ ಸಮಾನವಾಗಿ ಹಂಚಿಕೆ ಮಾಡಿಕೊಳ್ಳುತ್ತಿ ದ್ದರು. ಇದುವರೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರಲಿಲ್ಲ. ಕೃತ್ಯ ಎಸಗುವ ಸಂಬಂಧ ಚಿತ್ರದುರ್ಗದಿಂದ ಬೇರೆ ಊರುಗಳಿಗೆ ತೆರಳಲೆಂದೇ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದರು. ಕಾರಿನಲ್ಲಿ ಬಂದು ಕಳ್ಳತನ ಮಾಡಿ ಊರಿಗೆ ಹಿಂತಿರುಗುತ್ತಿದ್ದರು.
ಆರೋಪಿಗಳು ಸಿಕ್ಕಿದ್ದು ಹೇಗೆ?: ಗೃಹಿಣಿ ಲೀಲಾವತಿ ಮಾ.15ರಂದು ಬನಶಂಕರಿ ದೇವಸ್ಥಾನಕ್ಕೆ ಹೋಗಿದಾಗ ಕತ್ತಿನಲ್ಲಿದ್ದ 24 ಗ್ರಾಂ ಚಿನ್ನದ ಸರವನ್ನು ಆರೋಪಿಗಳು ಲಪಟಾಯಿ ಸಿದ್ದರು. ಈ ಬಗ್ಗೆ ಕೆ.ಎಸ್.ಲೇಔಟ್ ಪೊಲೀಸ್ ಠಾಣೆಗೆ ಲೀಲಾವತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ಸೇರಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಈ ಸುಳಿವಿನ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.