Advertisement

ಕೂಂಬಿಂಗ್‌ ಕಾರ್ಯಕ್ಕೆ ಅರಣ್ಯ ಇಲಾಖೆ ಸಿದ್ಧತೆ

12:52 PM Dec 08, 2019 | Naveen |

ಚಿತ್ರದುರ್ಗ: ಕಳೆದೊಂದು ವಾರದಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆನೆಯನ್ನು ಕಾರಿಡಾರ್‌ಗೆ ತಲುಪಿಸಲು ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಎರಡು ಆನೆಗಳನ್ನು ತಂದು ಕೂಂಬಿಂಗ್‌ ಮಾಡಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಶನಿವಾರ ಚಿತ್ರದುರ್ಗ ತಾಲೂಕಿನ ನಂದಿಪುರ ಬಳಿ ಆನೆ ಡ್ರೋಣ್‌ ಕಣ್ಣಿಗೆ ಬಿದ್ದಿದೆ. ದಾರಿ ತಪ್ಪಿ ಬಂದಿರುವ ಆನೆಯನ್ನು ಭದ್ರಾ ಅಭಯಾರಣ್ಯಕ್ಕೆ ಮರಳಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಶನಿವಾರ ಕೈಗೆತ್ತಿಕೊಂಡಿದೆ.

Advertisement

ಕೂಂಬಿಂಗ್‌ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೇಬೆ„ಲು ಆನೆ ಬಿಡಾರದ ಸಾಗರ ಹಾಗೂ ಬಾಲಣ್ಣ ಎಂಬ ಎರಡು ಆನೆಗಳು ಶನಿವಾರ ತಡರಾತ್ರಿ ಚಿತ್ರದುರ್ಗಕ್ಕೆ ತಲುಪಲಿವೆ. ಸಾಕಾನೆಗಳ ನೆರವಿನಿಂದ ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಕಾರ್ಯ ಭಾನುವಾರ ಆರಂಭವಾಗಲಿದೆ. ಜೋಗಿಮಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜಮೀನು, ತೋಟಗಳಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಕಣ್ಮರೆಯಾಗುತ್ತಿದ್ದ ಆನೆ ಶನಿವಾರ ಕಾರ್ಯಾಚರಣೆ ವೇಳೆ ವಾಚರ್ ಹಾಗೂ ಡ್ರೋಣ್‌ ಮೂಲಕ ಪತ್ತೆಯಾಗಿದೆ. ಆನೆ ಕಾರಿಡಾರ್‌ನಿಂದ ತಪ್ಪಿಸಿಕೊಂಡಿರುವ ಆನೆಯನ್ನು ಮರಳಿ ಅದರ ದಾರಿಗೆ ಬಿಡುವುದು ಇಲಾಖೆಯ ಉದ್ದೇಶ. ನಂದಿಪುರದ ಬೆಟ್ಟದ ಸಾಲಿನ ಅಹೋಬಲ ನರಸಿಂಹಸ್ವಾಮಿ ದೇಗುಲದ ಸಮೀಪ ಶನಿವಾರ ಆನೆ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಆನೆ ಎಲ್ಲಿ ಕಾಣಿಸಿಕೊಳ್ಳುತ್ತದೆಯೋ ಅಲ್ಲಿಗೆ ಸಕ್ರೆಬೈಲಿನ ಆನೆಗಳನ್ನು ಕರೆದೊಯ್ದು ಕ್ಯಾಂಪ್‌ ಮಾಡಲಾಗುತ್ತದೆ.

ನಂದಿಪುರ ಹಾಗೂ ಓಬೆನಹಳ್ಳಿ ಸಮೀಪದ ಶುಕ್ರವಾರ ರಾತ್ರಿ ಸಂಚರಿಸಿದ ಆನೆಯ ಹೆಜ್ಜೆ ಗುರುತುಗಳು ಸಿಕ್ಕಿವೆ. ಬೆಟ್ಟದ ಸಮೀಪದ ಮೆಕ್ಕೆಜೋಳದ ಹೊಲ ಹೊಕ್ಕ ಸಲಗ ಬೆಳೆ ನಾಶ ಮಾಡಿದೆ. ಬೆಳಿಗ್ಗೆ ಜನ ಸಂಚಾರ ಆರಂಭವಾಗುವುದಕ್ಕೂ ಮೊದಲೇ ಮತ್ತೆ ಬೆಟ್ಟಕ್ಕೆ ಮರಳಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಅರಣ್ಯದಲ್ಲಿ ಆನೆ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಕಕ್ಕೆಹರವು ಗ್ರಾಮದ ರಸ್ತೆಯಲ್ಲಿ ರಾತ್ರಿ 7 ಗಂಟೆಯ ಬಳಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆನೆ ಇರುವುದು ಖಚಿತವಾದ ಬಳಿಕ ಕಕ್ಕೆರು, ಕಸವನಹಳ್ಳಿ ಸೇರಿ ಹಿರಿಯೂರು ತಾಲೂಕಿನ ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರು ಜಾಗೃತರಾಗಿರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಸಲಗವನ್ನು ಭಾನುವಾರ ಕಾರಿಡಾರ್‌ಗೆ ತಲುಪಿಸುವ ಉದ್ದೇಶದಿಂದ ಆರು ಮಂದಿ ಟ್ರ್ಯಾಕರ್ಸ್‌, ಓರ್ವ ವನ್ಯಜೀವಿ ತಜ್ಞ ಸೇರಿದಂತೆ 12 ಮಂದಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ.

Advertisement

ಭಾನುವಾರ ಬೆಳಗ್ಗೆಯಿಂದ ಕಾರಿಡಾರ್‌ ಹಾಗೂ ಆನೆ ಪತ್ತೆ ಮಾಡಿ ಅದನ್ನು ಟ್ರ್ಯಾಕ್‌ಗೆ ತರುವ ಕಾರ್ಯಾಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಜನ ಜಂಗುಳಿ ಸೇರಿ ಗಲಾಟೆ ಮಾಡುವುದರಿಂದ ಕಾರ್ಯಾಚರಣೆಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜನ ಸೇರಬಾರದು ಎಂದು ಮನವಿ ಮಾಡಲಾಗಿದೆ.

ನೂರು ಸಿಬ್ಬಂದಿಗಳಿಂದ ಕಾರ್ಯಾಚರಣೆ: ನಂದಿಪುರ ಅರಣ್ಯದಲ್ಲಿ
ಆನೆ ಇರುವುದು ಗೊತ್ತಾಗುತ್ತಿದ್ದಂತೆ ಡಿಸಿಎಫ್‌ ಚಂದ್ರಶೇಖರ ನಾಯಕ ಹಾಗೂ ಎಸಿಎಫ್‌ ರಾಘವೇಂದ್ರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಇಡೀ ದಿನ ಬೆಟ್ಟದಿಂದ ಕೆಳಗೆ ಇಳಿಯದ ಆನೆ, ಸಂಜೆಯಾಗುತ್ತಲೇ ಹೆಜ್ಜೆ ಹಾಕಲು ಆರಂಭಿಸಿತ್ತು. ರಾತ್ರಿ ಅದು ಸಾಗುವ ಮಾರ್ಗದ ಮೇಲೆ ನಿಗಾ ಇಡಲಾಗಿತ್ತು.

ಡ್ರೋಣ್‌ ಮೂಲಕ ಆನೆ ಪತ್ತೆಯಾಗಿದ್ದು ಸಲಗ ಇರಬಹುದು ಎಂದು ಅಂದಾಜಿಸಲಾಗಿದೆ. ಸಕ್ರೆಬೈಲಿನಿಂದ ಎರಡು ಆನೆಗಳು ತಡರಾತ್ರಿ ಆಗಮಿಸಲಿದ್ದು, ಆನೆ ಕಾರಿಡಾರ್‌ಗೆ ಒಂಟಿ ಸಲಗವನ್ನು ತಲುಪಿಸಲು ಕಾರ್ಯಾಚರಣೆ ನಡೆಸಲಿದ್ದೇವೆ.
. ಚಂದ್ರಶೇಖರ ನಾಯಕ,
ಉಪ ಅರಣ್ಯ ಸಂರಕ್ಷಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next