ಚಿತ್ರದುರ್ಗ: ಸಮಸ್ಯೆಗಳು ಬಂದಾಗ ಧೈರ್ಯವಾಗಿ ಎದುರಿಸಬೇಕು. ಯಾವ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಏಕೆಂದರೆ ಭೂಮಿ ಮೇಲೆ ಮನುಷ್ಯರಾಗಿ ಹುಟ್ಟಿರುವುದೇ ಪುಣ್ಯ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ರುಡ್‌ಸೆಟ್ ಸಂಸ್ಥೆ ಆವರಣದಲ್ಲಿ ಶನಿವಾರ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಬರಪೀಡಿತ ಜಿಲ್ಲೆಯಾಗಿದ್ದು, ಇಲ್ಲಿ ಕೈಗಾರಿಕೆ, ನೀರಾವರಿ ಯಾವುದೂ ಇಲ್ಲ. ಜೀವನ ನಡೆಸುವುದೇ ಕಷ್ಟ. ಇದನ್ನು ಮನಗಂಡು ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ರುಡ್‌ಸೆಟ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸ್ವಯಂ ಉದ್ಯೋಗ ನಡೆಸಲು ಈ ಭಾಗದ ಜನರಿಗೆ ಹತ್ತಾರು ತರಬೇತಿ ನೀಡುತ್ತಿರುವುದು ಅವರಿಗಿರುವ ಸಾಮಾಜಿಕ ಕಾಳಜಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ಈ ರೀತಿಯ ತರಬೇತಿ ಕಾರ್ಯಕ್ರಮಗಳಿಗೆ ಎಲ್ಲಾ ತಾಲೂಕುಗಳಿಂದ ಸಮಾನವಾಗಿ ಫಲಾನುಭವಿಗಳ ಆಯ್ಕೆ ಮಾಡುವುದಕ್ಕಿಂತ ಜಿಲ್ಲಾ ಕೇಂದ್ರದ ಜನಸಂಖ್ಯೆ ಆಧರಿಸಿ ಹೆಚ್ಚು ಜನರಿಗೆ ಅವಕಾಶ ನೀಡಬೇಕು ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಇಂದು ಓದಿದವರಿಗೆ ಕೆಲಸ ಕೊಡುವ ಪದ್ಧತಿ ಯಾವ ದೇಶದಲ್ಲೂ ಇಲ್ಲ. ಓದು ಜ್ಞಾನಕ್ಕಾಗಿ. ಉದ್ಯೋಗವನ್ನು ನಮ್ಮ ಪ್ರತಿಭೆ ಹಾಗೂ ಕೌಶಲ್ಯದಿಂದ ಸಂಪಾದಿಸಿಕೊಳ್ಳುವ ಕಾಲದಲ್ಲಿದ್ದೇವೆ. ಆದರೆ ಓದಿದ್ದೇವೆ, ಕೆಲಸ ಇಲ್ಲ ಎಂದು ತಪ್ಪುದಾರಿ ಹಿಡಿಯಬಾರದು ಎಂದರು.
ಇಂದು ಟೈಲರಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿವೆ. ಬೆಂಗಳೂರಿನಿಂದ ಜಿಲ್ಲೆ, ತಾಲೂಕು ಕೇಂದ್ರಕ್ಕೆ ಗಾರ್ಮೆಂಟ್ಸ್ ಬರುತ್ತಿವೆ. ಇಲ್ಲಿ ತರಬೇತಿ ಪಡೆದವರು ಇಂತಹ ಕಡೆಗಳಲ್ಲಿ ಉದ್ಯೋಗ ಕಂಡುಕೊಳ್ಳಬಹುದು. ಜತೆಗೆ ಧರ್ಮಸ್ಥಳ ಸಂಸ್ಥೆಯಲ್ಲಿ ತರಬೇತಿ ಪಡೆದು ಪ್ರಮಾಣ ಪತ್ರ ತೆಗೆದುಕೊಂಡು ಹೋದರೆ ಬ್ಯಾಂಕುಗಳು ಸ್ವಉದ್ಯೋಗಕ್ಕೆ ಸಾಲ ಒದಗಿಸುತ್ತವೆ ಎಂದು ತಿಳಿಸಿದರು.
ಶಾಸಕರ ಅನುದಾನದ ಅಡಿಯಲ್ಲಿ ಹೌಸಿಂಗ್ ಬೋರ್ಡ್, ಬನಶಂಕರಿ ಬಡಾವಣೆ ಸುತ್ತಮುತ್ತಲಿನ ರಸ್ತೆ ನಿರ್ಮಾಣಕ್ಕೆ 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ರುಡ್‌ಸೆಟ್ ಸಂಸ್ಥೆ ನಿರ್ದೇಶಕಿ ಜಿ. ಮಂಜುಳಾ ಮಾತನಾಡಿ, ತರಬೇತಿ ಅವಧಿಯಲ್ಲಿ ಕಲಿತ ಕೌಶಲ್ಯವನ್ನು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡು ಯಶಸ್ಸು ಸಾಧಿಸಿ ಎಂದು ಶುಭ ಹಾರೈಸಿದರು. ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ನಿರೀಕ್ಷಕಿ ಸುವರ್ಣಮ್ಮ ಇದ್ದರು. ರುಡ್‌ಸೆಟ್ ಉಪನ್ಯಾಸಕ ತೋಟಪ್ಪ ಎಸ್. ಗಾಣಿಗೇರ್ ನಿರೂಪಿಸಿದರು. ಉಪನ್ಯಾಸಕಿ ಲತಾಮಣಿ ವಂದಿಸಿದರು. ಆ. 19 ರಿಂದ 6 ದಿನಗಳ ಕಾಲ, ಕಂಪ್ಯೂಟರ್ ಅಕೌಂಟ್ಸ್, ಹೈನುಗಾರಿಕೆ, ಟೈಲರಿಂಗ್ ಮತ್ತು ಉದ್ಯೋಗಿನಿ ಯೋಜನೆಯ ಇ.ಡಿ.ಪಿ ತರಬೇತಿ ಮತ್ತಿತರೆ ಕೌಶಲ್ಯಗಳನ್ನು ತರಬೇತಿಯಲ್ಲಿ ಕಲಿಸಲಾಗಿದೆ. 125 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು ಎಂದು ತಿಳಿಸಲಾಯಿತು