ಚಿತ್ರದುರ್ಗ: ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಆನೆಯೊಂದು ಕಣ್ಣಾಮುಚ್ಚಾಲೆ ಆಡುತ್ತಿದೆ. ನಾಲ್ಕು ದಿನಗಳಿಂದ ಜಿಲ್ಲೆಯಲ್ಲೇ ಓಡಾಡುತ್ತಿದ್ದರೂ ಯಾರ ಕಣ್ಣಿಗೂ ಬೀಳದೆ ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ.
ಮೂರು ದಿನಗಳ ಹಿಂದೆ ಕಕ್ಕೇರು ಬಳಿಯ ಜಮೀನೊಂದರಲ್ಲಿ ಆನೆ ಹೆಜ್ಜೆಗಳು ಕಾಣಿಸಿದ್ದವು. ಆದರೆ ಆನೆ ಯಾವ ಕಡೆಗೆ ಹೋಗಿದೆ ಎನ್ನುವುದು ಮಾತ್ರ ಗೊತ್ತಾಗಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಜೋಗಿಮಟ್ಟಿ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ಆನೆ ಕಾರಿಡಾರ್‌ನಲ್ಲಿರುವ ಹಳ್ಳಿಗಳ ರೈತರಿಗೆ ಎಚ್ಚರಿಕೆ ನೀಡಿದ್ದರು.
ಗುರುವಾರ ರಾತ್ರಿಯಿಡೀ ಸುಮಾರು 100 ಜನ ಸಿಬ್ಬಂದಿ ಕಾಡಂಚಿನ ಗ್ರಾಮಗಳ ಬಳಿ ಓಡಾಟ ನಡೆಸಿ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಎಲ್ಲಿಯೂ ಆನೆ ಪತ್ತೆಯಾಗಿಲ್ಲ. ಶುಕ್ರವಾರ ಕೂಡ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜೋಗಿಮಟ್ಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಹಿರಿಯೂರು ಹಾಗೂ ಹೊಳಲ್ಕೆರೆ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಸಹ ತಮ್ಮ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಹೀಗಿದ್ದರೂ ಎಲ್ಲಿಯೂ ಆನೆ ಮಾತ್ರ ಪತ್ತೆಯಾಗಲೇ ಇಲ್ಲ. ಜೋಗಿಮಟ್ಟಿ ಅರಣ್ಯ ಪ್ರದೇಶದ ಗೋಡೆಕಣಿವೆ ಎಂಬಲ್ಲಿ ಆನೆ ಗುರುವಾರ ರಾತ್ರಿ ಆಲದ ಮರದ ಸೊಪ್ಪು ಮುರಿದು ತಿಂದಿರುವುದು ಪತ್ತೆಯಾಗಿದೆ.
ಇಲ್ಲಿಂದ ಹೆಜ್ಜೆಗಳನ್ನು ಹಿಡಿದು ಹೊರಟ ಸಿಬ್ಬಂದಿಗಳಿಗೆ ಕುರುಮರಡಿಕೆರೆವರೆಗೆ ಆನೆ ಹೋಗಿರುವುದು ಪತ್ತೆಯಾಗಿದೆ. ಆದರೆ ಅಲ್ಲಿಂದ ಯಾವ ಕಡೆ ಹೋಗಿದೆ ಎನ್ನುವುದು ಮಾತ್ರ ತಿಳಿದಿಲ್ಲ. ಆರು ದಿನಗಳ ಹಿಂದೆ ಹೊಳಲ್ಕೆರೆ ತಾಲೂಕಿನಲ್ಲಿ ಆನೆಯ ಹೆಜ್ಜೆ ಗುರುತು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಇಷ್ಟು ಹೊತ್ತಿಗೆ ಆನೆ ಜಿಲ್ಲೆಯಿಂದ ಹೊರಗೆ ಹೋಗಬೇಕಾಗಿತ್ತು. ಹೋಗಿದೆಯೋ ಇಲ್ಲವೋ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
ಆನೆಯ ಹೆಜ್ಜೆ ಗುರುತು ಸುಮಾರೂ ಒಂದೂಮುಕ್ಕಾಲು ಅಡಿಯಿಂದ ಎರಡು ಅಡಿಯಷ್ಟು ಅಗಲವಿದೆ. ಇದರಿಂದ ಈ ಆನೆಗೆ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಸಾಧಾರಣವಾಗಿ ಆನೆ ಒಂದು ರಾತ್ರಿ ಸುಮಾರು 40 ಕಿಮೀ ಸಂಚರಿಸುತ್ತದೆ. ಆದರೆ ಈಗ ಹೆಜ್ಜೆ ಪತ್ತೆಯಾಗಿರುವ ಆನೆಯನ್ನು ಗಮನಿಸಿದರೆ ದಿನಕ್ಕೆ 20 ರಿಂದ 25 ಕಿಮೀ ಮಾತ್ರ ನಡೆಯುತ್ತಿದೆ. ಈ ಎಲ್ಲಾ ಅಂದಾಜುಗಳಂತೆ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಆನೆಗೆ ವಯಸ್ಸಾಗಿರಬಹುದು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.
ಡ್ರೋಣ್ ಕಣ್ಣಿಗೂ ಕಾಣದ ಸಲಗ
ಹಿರಿಯೂರಿನ ಪರಿಸರ ಪ್ರೇಮಿ ರಘು ಎಂಬುವವರು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಕೈಜೋಡಿಸಿ ಆನೆ ಪತ್ತೆ ಮಾಡಲು ಶುಕ್ರವಾರ ನೆರವಾಗಿದ್ದರು. ಇಡೀ ದಿನ ಡ್ರೋಣ್ ಮೂಲಕ ಹುಡುಕಾಟ ನಡೆಸಿದರೂ ಆನೆ ಪತ್ತೆಯಾಗಿಲ್ಲ. ಸಹಜವಾಗಿ ಆನೆ ನೀರು ಇರುವ ಕಡೆ ಹೋಗುತ್ತದೆ ಎನ್ನುವ ಆಧಾರದಲ್ಲಿ ಚಿಕ್ಕಸಿದ್ದವ್ವನಹಳ್ಳಿ ಕೆರೆ ಬಳಿಯೂ ತೆರಳಿ ಆನೆ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಕುರುಮರಡಿಕೆರೆ ಬಳಿ ಹೆಜ್ಜೆ ಕಾಣಿಸಿದ್ದರಿಂದ ಮುಂದೆ ಚಿಕ್ಕಸಿದ್ದವ್ವನಹಳ್ಳಿ ಅಥವಾ ಪಾಲವ್ವನಹಳ್ಳಿ ಮೂಲಕ ನಾಳೆ ಹಿರಿಯೂರು ತಲುಪಬಹುದು ಎಂದು ಆರ್‌ಎಫ್‌ಒ ಪ್ರದೀಪ್ ಕೇಸರಿ ಹಾಗೂ ಸಂದೀಪ್ ನಾಯಕ್ ಅಂದಾಜಿಸಿದ್ದಾರೆ.