ಚಿತ್ರದುರ್ಗ: ರಾಜ್ಯ ಹೆದ್ದಾರಿಯ ರಸ್ತೆ ತಿರುವುಗಳಲ್ಲಿ ಪ್ರತಿ 20 ಕಿಮೀಗೆ ಮಿನುಗುವ ಲೈಟ್ಸ್ ಹಾಗೂ ವಾಯ್ಸ ಅಲರ್ಟ್‌ಗಳನ್ನು ಅಳವಡಿಸುವ ಕೆಲಸ 15 ದಿನಗಳಲ್ಲಿ ಮುಗಿಯಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಿಂದ ಚಿತ್ರದುರ್ಗ ನಗರವನ್ನು ಪ್ರವೇಶಿಸುವ ವಾಹನಗಳಿಗೆ ಫ್ಲೈಓವರ್ ಬಳಿ ಎದುರಿಗೆ ಬರುವ ವಾಹನ ಕಾಣದೆ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಫ್ಲೈ ಓವರ್ ಬಳಿ ಕಾನ್ವೆಕ್ಸ್ ಮಿರರ್ ಫಲಕ ಅಳವಡಿಸಬೇಕು. ಅದರ ಪ್ರತಿಫಲನ ವಾಹನ ಚಾಲಕರಿಗೆ ಕಾಣುವಂತಿರಬೇಕು. ಮದ್ಯಪಾನ ಮಾಡಿ ಚಾಲನೆ ಮಾಡುವ ಚಾಲಕರ ತಪಾಸಣೆಗಾಗಿ ಆಲ್ಕೋಮೀಟರ್ ಹಾಗೂ ಅತಿ ವೇಗದ ಚಾಲನೆ ಮಾಡುವ ಚಾಲಕರ ತಪಾಸಣೆಗಾಗಿ ಸ್ಪೀಡ್ ಗನ್‌ಗಳ ಖರೀದಿಗೆ 1.8 ಲಕ್ಷ ರೂ. ಒದಗಿಸಲಾಗುವುದು. ಹಿರಿಯೂರು, ಚಿತ್ರದುರ್ಗ ಮತ್ತು ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆ.ಜೆ. ಹಳ್ಳಿ ಸಮೀಪ, ಶನೇಶ್ವರ ದೇವಸ್ಥಾನದ ಬಳಿ ಸ್ಥಳಾವಕಾಶ ಲಭ್ಯವಿದ್ದು ಅಲ್ಲಿ ಚಾಲಕರಿಗೆ ವಿಶ್ರಾಂತಿ ಪಡೆಯುವ ಸಲುವಾಗಿ ಒಂದು ರಿಫ್ರೆಶ್‌ಮೆಂಟ್ ಮಳಿಗೆ ಅಥವಾ ಟರ್ಮಿನಲ್ ಸ್ಥಾಪನೆ, ಅಪಘಾತ ವಲಯಗಳಲ್ಲಿ ಸೂಚನಾ ಫಲಕದೊಂದಿಗೆ ಸೋಲರ್ ಆಧಾರಿತ ಬ್ಲಿಂಕರ್ ಲೈಟ್‌ಗಳ ಅಳವಡಿಕೆ ಹಾಗೂ ರಾತ್ರಿ ಸಮಯದಲ್ಲಿ ಎದ್ದು ಕಾಣುವ ರಸ್ತೆ ಮಾರ್ಗ ವಿಭಜಕಗಳನ್ನು ಉತ್ತಮ ಗುಣಮಟ್ಟದ ಬಿಳಿ ಬಣ್ಣದ ಪಟ್ಟಿಗಳನ್ನು ಅಪಘಾತ ವಲಯಗಳಲ್ಲಿ ಹಾಕಿಸಬೇಕು ಎಂದು ಸೂಚಿಸಿದರು.
ಈ ಎಲ್ಲಾ ಕಾರ್ಯ 15 ದಿನಗಳ ಒಳಗಾಗಿ ಆಗಬೇಕು. ತಪ್ಪಿದಲ್ಲಿ ಈ ಭಾಗದಲ್ಲಾದ ಯಾವುದೇ ಅಪಘಾತ ಪ್ರಕರಣಗಳಲ್ಲಿ ಸಮಿತಿಯ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪರಿಗಣಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳು ಹೆದ್ದಾರಿಯ ಮೇಲೆ ಸಂಚರಿಸುವಾಗ ತಿರುವುಗಳಲ್ಲಿ ತಪ್ಪದೆ ಇಂಡಿಕೇಟರ್ ಬಳಸುವಂತೆ ಚಾಲಕರಲ್ಲಿ ಅರಿವು ಮೂಡಿಸಬೇಕು. ತಾಲೂಕು ಕೇಂದ್ರಗಳ ನಡುವೆ ಬಸ್ ಸೇವೆ ಪ್ರಾರಂಭಿಸಬೇಕು. ಹೆದ್ದಾರಿಗಳ ಮೇಲೆ ಅಥವಾ ರಸ್ತೆ ಬದಿಯಲ್ಲಿ ತಿನಿಸು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಲು ಮಾರಾಟಗಾರರು ವಾಹನಗಳ ಬಳಿ ಬರುತ್ತಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಹಾಗೂ ಶಾಲಾ ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ಕೊಂಡೊಯ್ಯಲಾಗುತ್ತಿದ್ದು, ಇದಕ್ಕೆ ಕಾರಣಗಳನ್ನು ತಿಳಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚನೆ ನೀಡಿದರು.
Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ರಸ್ತೆ ಸುರಕ್ಷತಾ ನಿಧಿಯಡಿ ಜಿಲ್ಲೆಯ ರಸ್ತೆ ಸುರಕ್ಷತಾ ಕಾರ್ಯ ಚಟುವಟಿಕೆಗಳಿಗಾಗಿ 8.30 ಲಕ್ಷ ರೂ. ಅನುದಾನವನ್ನು ರಾಜ್ಯ ಮಟ್ಟದ ಸಮಿತಿ ಬಿಡುಗಡೆ ಮಾಡಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
Related Articles
Advertisement
ಪ್ರಾದೇಶಿಕ ಸಾರಿಗೆ ಅಧಿಕಾರಿ ಗಣಪತಿ ಎಸ್. ಹೆಗಡೆ ಮಾತನಾಡಿ, ಜಿಲ್ಲೆಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಸುಮಾರು 200 ಉಬ್ಬು ತಗ್ಗುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಬೇಕು. ಪ್ರತಿ 50
ಕಿಮೀ ಅಂತರಕ್ಕೆ ಒಂದು ಅ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ. ಕ್ಯಾದಿಗೆರೆಯಿಂದ ಚಿತ್ರದುರ್ಗಕ್ಕೆ 60 ಕಿಮೀ ಅಂತರ ಇರುವುದರಿಂದ ಪ್ರಸ್ತುತ ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಡಿ ಭರಮಸಾಗರ, ಐಮಂಗಲ ಹಾಗೂ ಜವನಗೊಂಡನಹಳ್ಳಿಯಲ್ಲಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಎರಡು ಆ್ಯಂಬುಲೆನ್ಸ್ ಸೇವೆ ಕಲ್ಪಿಸುವಂತೆ ಡಿಎಚ್ಒಗೆ ಮನವಿ ಮಾಡಿದರು.
ಸಭೆಯಲ್ಲಿ ಡಿವೈಎಸ್‌ಪಿ ವಿಜಯಕುಮಾರ್ ಸಂತೋಷ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಡಿಎಚ್ಒ ಡಾ| ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್, ಕೆಎಸ್‌ಆರ್‌ಟಿಸಿ ಡಿಸಿ ಪ್ರಸನ್ನಕುಮಾರ್ ಬಾಲನಾಯಕ್ ಮತ್ತಿತರರು ಭಾಗವಹಿಸಿದ್ದರು.
ರಾಜ್ಯ ಹೆದ್ದಾರಿ ರಸ್ತೆ ತಿರುವುಗಳಲ್ಲಿ ಪ್ರತಿ 20 ಕಿಮೀಗೆ ಲೈಟ್ಸ್-ವಾಯ್ಸ ಅಲರ್ಟ್ ಅಳವಡಿಸಿ: ಜಿಲ್ಲಾಧಿಕಾರಿ ಸೂಚನೆ
ವಿದ್ಯಾರ್ಥಿ ಸೇವೆಗೆ ಪ್ರಶಂಸೆ
ಇಂಗಳದಾಳ ಗ್ರಾಮದ ಬಿ.ಇಡಿ ವಿದ್ಯಾರ್ಥಿ ರಂಗಸ್ವಾಮಿ, ಜಿಲ್ಲೆಯ ನಾನಾ ಭಾಗದ ಸುಮಾರು 250 ವಿದ್ಯಾರ್ಥಿಗಳನ್ನೊಳಗೊಂಡ ‘ಸಂಜೀವಿನಿ’ ವ್ಯಾಟ್ಸ ಆ್ಯಪ್ ಗುಂಪು ರಚಿಸಿಕೊಂಡಿದ್ದಾರೆ. ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಜರುಗುವ ಅಪಘಾತದ ಬಗ್ಗೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಧಾವಿಸಿ ನೆರವು ಒದಗಿಸುತ್ತಿರುವ ಕಾರ್ಯ ಪ್ರಶಂಸನೀಯ. ಈ ಗುಂಪಿನಲ್ಲಿ ಸಮಾನ ಮನಸ್ಕ ವಿದ್ಯಾರ್ಥಿಗಳಿದ್ದು, ಸಮಾಜಸೇವೆಗಾಗಿ ತಮ್ಮ ಸಮಯ ಮೀಸಲಿಡುತ್ತಿದ್ದಾರೆ. ಇಂತಹ ಕಾರ್ಯಗಳಿಗೆ ಅಧಿಕಾರಿಗಳು ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ತಂಡದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ ಹಾಗೂ ಸಂಚಾರಿ ನಿಯಮಗಳ ಕುರಿತು ತರಬೇತಿ ನೀಡುವಂತೆ ಡಿಎಚ್ಒ ಹಾಗೂ ಆರ್‌ಟಿಒಗೆ ಸೂಚಿಸಿದರು.