Advertisement

ಪ್ರತಿಧ್ವನಿಸಿದ ಕಂಟೇನರ್‌ ಹಗರಣ

12:18 PM Aug 30, 2019 | Naveen |

ಚಿತ್ರದುರ್ಗ: ಅಕ್ಷರ ದಾಸೋಹ ಕೇಂದ್ರಗಳಿಗೆ ಸರಬರಾಜು ಮಾಡಿರುವ ಕಂಟೇನರ್‌ಗಳು ಕಳಪೆಯಾಗಿದ್ದು, ಇನ್ನೊಂದು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ ತಿಳಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ನಡೆದ 7ನೇ ಸಾಮಾನ್ಯ ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸೌಭಾಗ್ಯ ಬಸವರಾಜನ್‌ ಪ್ರಶ್ನೆಗೆ ಅವರು ಉತ್ತರಿಸಿದರು.

ಸೌಭಾಗ್ಯ ಬಸವರಾಜನ್‌ ಅವರು ಸಾಮಾನ್ಯ ಸಭೆಗೆ ವಿವಿಧ ಶಾಲೆಗಳಿಂದ ಸ್ಟೀಲ್ ಕಂಟೇನರ್‌ಗಳನ್ನು ತರಿಸಿದ್ದರು. ದೊಡ್ಡಸಿದ್ದವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ ಶಾಲೆಗೆ 93,300 ರೂ.ಗೆ 9 ಕಂಟೇನರ್‌ ಕೊಡಲಾಗಿದೆ. ಜೆ.ಎನ್‌. ಕೋಟೆ ಶಾಲೆಗೆ 93 ಸಾವಿರಕ್ಕೆ 36 ಕಂಟೇನರ್‌ಗಳನ್ನು ಸ್ಥಳೀಯ ಗ್ರಾಪಂ ಸದಸ್ಯರೇ ಖರೀದಿಸಿದ್ದಾರೆ. ದ್ಯಾಮವ್ವನಹಳ್ಳಿ ಅಕ್ಷರ ದಾಸೋಹ ಕೇಂದ್ರಕ್ಕೆ 68 ಸಾವಿರಕ್ಕೆ 6 ಕಂಟೇನರ್‌ ಖರೀದಿಸಲಾಗಿದೆ. ಜೆ.ಎನ್‌. ಕೋಟೆಯಲ್ಲಿ ಸ್ಟೀಲ್ ಕಂಟೇನರ್‌ ಇದ್ದರೆ, ಡಿ.ಎಸ್‌. ಹಳ್ಳಿಯಲ್ಲಿ ಡಬ್ಬದಿಂದ ಮಾಡಿರುವ ಬಾಕ್ಸ್‌ ಕೊಡಲಾಗಿದೆ. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ತಂಡ ರಚನೆ ಮಾಡಿ ಒಂದು ವರ್ಷ ಕಳೆಯಿತು. ಯಾವಾಗ ವರದಿ ಸಲ್ಲಿಸುತ್ತೀರಿ ಎಂದು ಸೌಭಾಗ್ಯ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ಓಬಳೇಶ್‌, ನನ್ನ ಕ್ಷೇತ್ರಕ್ಕೆ ಕಂಟೇನರ್‌ ಸರಬರಾಜು ಮಾಡಿಯೇ ಇಲ್ಲ. ಆದರೆ ಹಣ ಬಿಡುಗಡೆಯಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸರಿಯಾದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ತನಿಖಾ ವರದಿ ಹೊರಗೆ ಬರುವ ಮೊದಲೇ ಕಂಟೇನರ್‌ ತಂದು ಪ್ರದರ್ಶನ ಮಾಡಿದರೆ ಕಳಪೆ ಕೆಲಸ ಮಾಡಿರುವವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಸದಸ್ಯ ಕೃಷ್ಣಮೂರ್ತಿ ಸಿಡಿಮಿಡಿಗೊಂಡರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ತನಿಖಾ ತಂಡದ ಅಧ್ಯಕ್ಷ ಡಿ.ಕೆ. ಶಿವಮೂರ್ತಿ, ಈಗಾಗಲೇ 150 ಗ್ರಾಪಂಗಳ ಪೈಕಿ 100 ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಹಲವು ಅಕ್ಷರ ದಾಸೋಹ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಕಂಟೇನರ್‌ ಇರುವುದು ತಿಳಿದು ಬಂದಿದೆ. ಇನ್ನೊಂದು ತಿಂಗಳಲ್ಲಿ ಉಳಿದ ಶಾಲೆಗಳಿಗೂ ಭೇಟಿ ನೀಡಿ ವರದಿ ಸಲ್ಲಿಸುತ್ತೇವೆ. ಕೂಲಂಕುಷವಾಗಿ ಪರಿಶೀಲಿಸಬೇಕಿದೆ. ಅವಸರ ಮಾಡಿ ಹೀಗೆ ಕಂಟೇನರ್‌ ತಂದು ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡರಗಿ ನಾಗರಾಜ್‌ ಮಾತನಾಡಿ, ಸೌಭಾಗ್ಯ ಬಸವರಾಜನ್‌

ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅನುದಾನ, ಬಿಆರ್‌ಜಿಎಫ್‌ ಕಂಟೇನರ್‌ ಖರೀದಿ, ಕ್ರೀಡಾ ಸಾಮಗ್ರಿ ಖರೀದಿ ಹಾಗೂ ಸೋಲಾರ್‌ ಪ್ಲಾಂಟ್‌ಗಳ ಕುರಿತು ತನಿಖಾ ತಂಡ ರಚಿಸಿದ್ದು ಎಲ್ಲವೂ ಪಾರದರ್ಶಕವಾಗಿ ತನಿಖೆಯಾಗುತ್ತಿವೆ. ಸ್ವಲ್ಪ ತಾಳ್ಮೆ ವಹಿಸಿ, ಎಲ್ಲ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಸಿಇಒ ಕಾರ್ಯವೈಖರಿಗೆ ಸದಸ್ಯರ ಅಸಮಾಧಾನ: ಸಭೆ ಆರಂಭವಾಗುತ್ತಿದ್ದಂತೆ ಅನುಪಾಲನಾ ವರದಿ ಮಂಡಿಸಿದ ಜಿಪಂ ಸಿಇಒ ಸಿ. ಸತ್ಯಭಾಮ, ಕ್ರಿಯಾ ಯೋಜನೆ ಹೊರತುಪಡಿಸಿ ಹೆಚ್ಚುವರಿ ಕೊಳವೆ ಬಾವಿ ಕೊರೆಯಿಸಿ ಕಾನೂನು ಉಲ್ಲಂಘನೆ ಮಾಡಿರುವ ಎಲ್ಲ ತಾಲೂಕುಗಳ ಇಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಇದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸದಸ್ಯ ಕೃಷ್ಣಮೂರ್ತಿ, ಬಾಯಾರಿದ ಜನರಿಗೆ ನೀರು ಕೊಟ್ಟ ಇಂಜಿನಿಯರ್‌ ಹಾಗೂ ಇಒಗಳಿಗೆ ಅಭಿನಂದನೆ ಎಂದು ಹೇಳುವ ಮೂಲಕ ಸಿಇಒಗೆ ಇರಿಸುಮುರಿಸಾಗುವಂತೆ ಮಾಡಿದರು. ಇದುವರೆಗೆ ಜಿಪಂನಿಂದ ಸರ್ಕಾರಕ್ಕೆ ಯಾವೆಲ್ಲಾ ಪತ್ರ ಬರೆದಿದ್ದೀರಿ, ಎಲ್ಲವನ್ನೂ ಸಭೆಯ ಗಮನಕ್ಕೆ ತನ್ನಿ ಎಂದು ಪಟ್ಟು ಹಿಡಿದರು.

ಸದಸ್ಯೆ ಸೌಭಾಗ್ಯ ಬಸವರಾಜನ್‌ ಮಾತನಾಡಿ, ಹಿಂದಿನ ಸಭೆಯಲ್ಲಿ ಹೆಚ್ಚುವರಿ ಕೊಳವೆಬಾವಿ ಕೊರೆದವರ ಮೇಲೆ ಕ್ರಮ ತೆಗೆದುಕೊಳ್ಳಲು ಅಬ್ಬರಿಸಿದ್ದ ಕೃಷ್ಣಮೂರ್ತಿ ಈಗ ಅಭಿನಂದನೆ ಸಲ್ಲಿಸುವುದರ ಅರ್ಥ ಏನು, ಜತೆಗೆ ಗ್ರಾಮ ಸಮಿತಿಗಳ ಒಪ್ಪಿಗೆ ಮೇರೆಗೆ ಕೊಳವೆಬಾವಿ ಕೊರೆಸಲಾಗಿತ್ತು ಎಂದು ಸಿಇಒ ತಿಳಿಸಿದ್ದರು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಕಳೆದ ಸಭೆಯಲ್ಲೇ ಕೊಡುವುದಾಗಿ ತಿಳಿಸಿ ಇದುವರೆಗೂ ಕೊಟ್ಟಿಲ್ಲ. ಈ ಮಾಹಿತಿ ಕೊಟ್ಟು ಸಭೆ ಮುಂದುವರೆಸಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಮೂರ್ತಿ, ನಾನು ಕಳೆದ ಸಭೆಯಲ್ಲಿ ಅಬ್ಬರಿಸಿದ್ದು ನಿಜ. ನಾವೆಲ್ಲಾ ಶಿಫಾರಸ್ಸು ಮಾಡಿದ್ದರಿಂದಲೇ ಕೊಳವೆಬಾವಿ ಕೊರೆಸಿದ್ದಾರೆ. ಹಾಗಾಗಿ ಅನುದಾನ ಪಾವತಿ ಮಾಡಿ ಎಂದು ಒತ್ತಾಯಿಸಿದ್ದಾಗಿ ಸಮಜಾಯಿಷಿ ನೀಡಿದರು.

ಸದಸ್ಯ ಅಜ್ಜಪ್ಪ ಮಾತನಾಡಿ, ಹೆಚ್ಚುವರಿ ಕೊಳವೆಬಾವಿಗಳಿಗೆ ಬಿಲ್ ಮಾಡುವ ವಿಚಾರ ಈಗಾಗಲೇ ಹಣಕಾಸು ಇಲಾಖೆಗೆ ಹೋಗಿದೆ. ಹೀಗಿರುವಾಗ ಅಧಿಕಾರಿಗಳ ಕ್ರಮ ಯಾಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next