ಚಿತ್ರದುರ್ಗ: ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್ ಆ್ಯಕ್ಟ್ 1995) ವ್ಯಾಪ್ತಿಗೆ ಒಳಪಡುವ ಕೇಬಲ್ ಆಪರೇಟರ್‌ಗಳು ಟ್ರಾಯ್ ಮಾರ್ಗಸೂಚಿ ಅನ್ವಯ ಪ್ರತಿ ಚಾನಲ್ ದರವನ್ನು ತಮ್ಮ ಕಚೇರಿಯಲ್ಲಿ ಪ್ರದರ್ಶಿಸಿ ಗ್ರಾಹಕರಿಗೆ ಕರಪತ್ರ ನೀಡಬೇಕು. ಟ್ರಾಯ್ ನಿಗದಿ ಮಾಡಿರುವಷ್ಟು ಶುಲ್ಕ ಪಡೆದು ಕಡ್ಡಾಯವಾಗಿ ರಶೀದಿ ಕೊಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚಿಸಿದರು.
ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗೆ (ರೆಗ್ಯುಲೇಷನ್ ಆ್ಯಕ್ಟ್ 1995) ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಯ್ದೆಗೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಕೋಶವನ್ನು ಸ್ಥಾಪಿಸಲಾಗಿದೆ. ಕೇಬಲ್ ನಲ್ಲಿ ಪ್ರಸಾರವಾಗುವ ಯಾವುದೇ ಚಾನಲ್‌ಗಳಲ್ಲಿ ಕಾರ್ಯಕ್ರಮ ಸಂಹಿತೆ ಹಾಗೂ ಜಾಹೀರಾತು ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಜಿಲ್ಲಾ ಮಟ್ಟದ ಸಮಿತಿಗೆ ದೂರು ನೀಡಬಹುದು. ಟ್ರಾಯ್‌ನಿಂದ ಕೇಬಲ್ ಚಾನಲ್ ಪ್ರಸಾರಕ್ಕೆ ದರ ನಿಗದಿಪಡಿಸಲಾಗಿದ್ದು, ಉಚಿತ ಚಾನಲ್‌ಗಳಿಗೆ ದರ ವಿಧಿಸುವಂತಿಲ್ಲ. ಪೇ ಚಾನಲ್‌ಗಳಿಗೆ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವಂತಿಲ್ಲ ಎಂದರು.
ಚಂದಾ ಮೊತ್ತ ಸಂಗ್ರಹಿಸಲು ಹಾಗೂ ಕೇಬಲ್ ದುರಸ್ತಿಗೆ ಗ್ರಾಹಕರ ಮನೆಗಳಿಗೆ ಬೆಳಿಗ್ಗೆ 8 ರಿಂದ 10:30 ಗಂಟೆ ಹಾಗೂ ಸಂಜೆ 5 ರಿಂದ 7 ಗಂಟೆ ಅವಧಿಯಲ್ಲಿಯೇ ಭೇಟಿ ನೀಡಬೇಕು. ಚಂದಾ ಮೊತ್ತ ಸಂಗ್ರಹಿಸುವ ಹಾಗೂ ಕೇಬಲ್ ದುರಸ್ತಿಗೆ ತೆರಳುವ ಸಿಬ್ಬಂದಿಗಳಿಗೆ ಡ್ರೆಸ್ ಕೋಡ್ ನಿಗದಿಪಡಿಸಿ ಅವರಿಗೆ ಗುರುತಿನ ಕಾರ್ಡ್ ನೀಡಿರಬೇಕು. ಗುರುತಿನ ಕಾರ್ಡ್ ನೀಡಲಾಗುವ ಎಲ್ಲ ಸಿಬ್ಬಂದಿಗಳ ವಿವರವನ್ನು ಜಿಲ್ಲಾ ಮಟ್ಟದ ಸಮಿತಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದರು.
ಗ್ರಾಹಕರ ದೂರುಗಳಿಗೆ ಸ್ಪಂದಿಸಲು ಇರುವ ಸಹಾಯವಾಣಿ ವಿವರನ್ನು ಕರಪತ್ರದಲ್ಲಿ ತಪ್ಪದೇ ನಮೂದಿಸಬೇಕು. ಮಕ್ಕಳು ಮತ್ತು ಮಹಿಳೆಯರ ಮೇಲೆ ಪ್ರಭಾವ ಬೀರುವಂತಹ, ಅಥವಾ ಧರ್ಮ, ಜನಾಂಗ, ಭಾಷೆ, ಜಾತಿ, ಸಮುದಾಯಗಳ ನಡುವೆ ದ್ವೇಷ ಭಾವನೆ ಉಂಟು ಮಾಡಬಹುದಾದಂತಹ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಪ್ರಸಾರ ಮಾಡುವಂತಿಲ್ಲ. ಕೇಬಲ್ ಚಾನಲ್‌ನಲ್ಲಿ ಆಕ್ಷೇಪಾರ್ಹ ಕಾರ್ಯಕ್ರಮ ಪ್ರಸಾರ ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮಿತಿಗೆ ದೂರು ಸಲ್ಲಿಸಬಹುದು.
ಕೇಬಲ್ ಆಪರೇಟರ್‌ಗಳು ಕಡ್ಡಾಯವಾಗಿ ಅಂಚೆ ಇಲಾಖೆಯಲ್ಲಿ ನೋಂದಾಯಿಸಿ ನಿಯಮಾನುಸಾರ ನೋಂದಣಿ ನವೀಕರಿಸಿಕೊಂಡಿರಬೇಕು ಎಂದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಪರವಾನಗಿ ಪಡೆದಿರುವ ಚಾನಲ್‌ಗಳನ್ನು ಮಾತ್ರ ಪ್ರಸಾರ ಮಾಡಬೇಕು. ನಿಷೇ ಧಿತ ಚಾನಲ್‌ಗಳ ಪ್ರಸಾರ ಮಾಡುವಂತಿಲ್ಲ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಸಮಿತಿ ಸದಸ್ಯರಾದ ನಿವೃತ್ತ ಪ್ರಾಚಾರ್ಯ ಪ್ರೊ| ಲಿಂಗಪ್ಪ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ರಜನಿ, ಸರ್ಕಾರಿ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ, ಆರೋಗ್ಯ ಇಲಾಖೆ ಮನೋವೈದ್ಯ ಡಾ| ಮಂಜುನಾಥ್, ಪೊಲೀಸ್ ಇಲಾಖೆಯ ಶಿವಮೂರ್ತಿ, ವಾರ್ತಾ ಸಹಾಯಕ ತುಕಾರಾಮ್ ರಾವ್ ಭಾಗವಹಿಸಿದ್ದರು.