ಚಿತ್ರದುರ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಜನಮನ ಸೆಳೆಯಿತು.
ಸದಾ ಅತ್ತಿಂದಿತ್ತ ಓಡಾಡುವ ಜನ, ಬಸ್ಸುಗಳ ಓಡಾಟದಿಂದ ಕೂಡಿರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದು ತುಸು ಬದಲಾವಣೆ ಕಾಣಿಸುತ್ತಿತ್ತು. ದೂರದ ಊರಿಗೆ ಹೋಗುವ ಬಸ್ ಹಿಡಿಯುವ ಧಾವಂತದಲ್ಲಿ ಬರುತ್ತಿದ್ದವರು ನಿಲ್ದಾಣದ ಪ್ರವೇಶ ದ್ವಾರಕ್ಕೆ ಬರುತ್ತಲೇ ಒಂದು ಕ್ಷಣ ನಿಂತು ಅತ್ತಿತ್ತ ಕಣ್ಣಾಡಿಸಿ ಮುಂದೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಡುಗೆ ಮನೆಯ ಹಸಿ ತ್ಯಾಜ್ಯವನ್ನು ಬೀದಿಗೆ ಬಿಸಾಡದೆ ಮನೆ ಹಿಂಭಾಗದಲ್ಲೇ ಮುಚ್ಚುವ ಗುಂಡಿ ಮಾಡಿ ಅಲ್ಲಿ ಹಾಕಿದರೆ ಉತ್ತಮ ಗೊಬ್ಬರ ತಯಾರಾಗುತ್ತದೆ ಎಂಬ ಪೋಸ್ಟರ್ ಮೇಲೆ ಮಹಿಳೆಯರು ಆಸಕ್ತಿಯಿಂದ ಕಣ್ಣಾಡಿಸುತ್ತಿದ್ದರು. ಶೌಚಕ್ಕೆ ಬಯಲಿಗೆ ಹೋಗುವುದಕ್ಕಿಂತ ಮನೆಯ ಬಳಿ ಶೌಚಗೃಹ ನಿರ್ಮಾಣ ಮಾಡಿಕೊಂಡರೆ ಆರೋಗ್ಯದ ಸಮಸ್ಯೆ ಉಂಟಾಗದು. ಶೌಚಾಲಯ ಒಂದು ಅರ್ಥದಲ್ಲಿ ನಮ್ಮ ಮರ್ಯಾದೆ ಕಾಪಾಡುವ ಮರ್ಯಾದೆ ಮನೆ ಎಂಬ ಪೋಸ್ಟರ್ ಕೂಡ ಗಮನ ಸೆಳೆಯಿತು. ಅಲ್ಲದೆ ನೀರಿನ ಅಭಾವ ಎದುರಿಸುತ್ತಿರುವ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಮಾಹಿತಿಯನ್ನು ಬಿತ್ತರಿಸಲಾಯಿತು. ಪೌಷ್ಟಿಕ ಆಹಾರ, ಕ್ಷಯ ರೋಗ ನಿಯಂತ್ರಣ, ಮಾನಸಿಕ ಆರೋಗ್ಯ, ತುರ್ತು ವೈದ್ಯಕೀಯ ಸೇವೆಗಳು, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರಿಂದ ಆಗುವ ಅನುಕೂಲ, ಹಸುಗೂಸುಗಳಿಗೆ ಕಾಂಗರೂ ಮಾದರಿ ಆರೈಕೆ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಲಾಯಿತು.
ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ನೀರು ಉಳಿಸಿ ಹಸಿರು ಬೆಳೆಸಿ. ಸ್ವಚ್ಛ ಗ್ರಾಮಕ್ಕೆ ಹೊಸ ದಾರಿ, ಹಸಿ ಮತ್ತು ಒಣ ಕಸಗಳ ವಿಂಗಡಣೆ, ಮಿತವಾಗಿ ಬಳಸಿ ನೀರು ಉಳಿಸಿ, ವಿದ್ಯುತ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಪ್ರದರ್ಶಿಸಲಾಯಿತು.