ಚಿತ್ರದುರ್ಗ: ಪ್ರತಿ ದಿನ ಸಾವು, ನೋವಿನ ಸುದ್ದಿ, ಆಕ್ಸಿಜನ್, ಬೆಡ್ ಎಂದೇ ಬಡಬಡಾಯಿಸುತ್ತಿದ್ದ ಕೊರೊನಾ ಆಸ್ಪತ್ರೆಯ ಕಿಟಕಿಗಳಿಂದ ಸಂಗೀತದ ಆಲಾಪಗಳು, ಚಪ್ಪಾಳೆಯ ಸದ್ದು, ನಗುವಿನ ಅಲೆ ತೇಲಿ ಬಂದ ಅಚ್ಚರಿ ನಡೆದಿದೆ.
ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಸಂಗೀತ ಸಂಜೆ ಕಾರ್ಯಕ್ರಮ ನಡೆದಿದೆ. ಸೋಂಕಿತರೊಬ್ಬರು ಹಾಡಿದ ಹಾಡಿಗೆ ವೈದ್ಯರು, ಶುಶ್ರೂಷಕರು ಧ್ವನಿಗೂಡಿಸಿದ್ದಾರೆ.
ಬಸವ ಜಯಂತಿ ಹಾಗೂ ಅಕ್ಷಯ ತೃತೀಯದ ಅಂಗವಾಗಿ ರವಿಶಂಕರ್ ಎಂಬ ಸೋಂಕಿತರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಮೂಲತಃ ಸಂಗಿತ ಶಿಕ್ಷಕರೂ ಅಗಿರುವ ಇವರು ಕೋವಿಡ್ ಚಿಕಿತ್ಸೆಗೆ ಇಲ್ಲಿ ದಾಖಲಾಗಿದ್ದಾರೆ.
ಕೋವಿಡ್ ತಗುಲಿದೆ ಎಂಬ ಮಾನಸಿಕ ಒತ್ತಡಕ್ಕೆ ಸಿಲುಕಿದ ಸೋಂಕಿತರನ್ನು ರಂಜಿಸಿ, ಧೈರ್ಯ ತುಂಬಬೇಕು ಎನ್ನುವ ದೃಷ್ಟಿಯಿಂದ ಈ ಕಾರ್ಯಕ್ಕೆ ನಡೆಸಿರುವುದು ವಿಶೇಷ.
ಹತ್ತಕ್ಕೂ ಹೆಚ್ಚು ಸೋಂಕಿತರು ಇರುವ ವಾರ್ಡ್ ಗೆ ಕೀಬೋರ್ಡ್ ತರಿಸಿಕೊಂಡಿದ್ದಾರೆ. ಹಾಸಿಗೆ ಮೇಲೆಯೇ ಕುಳಿತು ಕೀ ಬೋರ್ಡ್ ನುಡಿಸಿ ಸಂಗೀತ ಸಂಜೆಗೆ ಚಾಲನೆ ನೀಡಿದ್ದಾರೆ. ವಚನದ ಮೂಲಕ ಆರಂಭವಾದ ಕಾರ್ಯಕ್ರಮ ಸಂಗೀತದ ರಸದೌತಣ ನೀಡಿದೆ. ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ’ ಎಂಬ ಹಾಡು ಹಾಡಿ ರಂಜಿಸಿದ್ದಾರೆ. ರವಿಶಂಕರ್ ಕೀ ಬೋರ್ಡ್ ನುಡಿಸಿದರೆ ಇತರೇ ಸೋಂಕಿತರು ಹಾಡಿನ ಸಂಗೀತಕ್ಕೆ ಚಪ್ಪಾಳೆ ತಟ್ಟುವ ಮೂಲಕ ಸಾಥ್ ನೀಡಿದ್ದಾರೆ.
‘ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ವೈದ್ಯರು ಸಮಯಕ್ಕೆ ಸರಿಯಾಗಿ ಬಂದು ಚಿಕಿತ್ಸೆ ಕೊಡುವ ಮೂಲಕ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಮಾತ್ರೆ, ಔಷಧವನ್ನು ಸಕಾಲಕ್ಕೆ ನೀಡುತ್ತಿದ್ದಾರೆ. ಇಲ್ಲಿ ಆಮ್ಲಜನಕದ ಕೊರತೆ ಎದುರಾಗಿಲ್ಲ. ನಾವೆಲ್ಲರೂ ಆರಾಮಾಗಿ ಇದ್ದೇವಿ, ಮನೆಯವರು, ಬಂಧುಗಳು ಸ್ನೇಹಿತರು ಭಯಪಡುವ ಅಗತ್ಯವಿಲ್ಲ. ಕೋವಿಡ್ ಅನ್ನು ಧೈರ್ಯದಿಂದ ಎದುರಿಸಿ ಹೊರಬರುತ್ತೇವೆ’ ಎಂದು ಹೇಳಿದ್ದಾರೆ.
ವೈದ್ಯ ಬಸವರಾಜ್, ಶುಶ್ರೂಷಕರಾದ ಸಂಧ್ಯಾ, ಪ್ರತಾಪ್ ದ್ರೂಪಿ, ಭಾಗ್ಯ ಸಿದ್ದು, ಮಂಗಳಾ ಅವರು ಸಂಗಿತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.