Advertisement

ಪೌರತ್ವ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ

11:25 AM Dec 28, 2019 | Naveen |

ಚಿತ್ರದುರ್ಗ: ಪೌರತ್ವ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ. ಇದು ಪೌರತ್ವ ಕೊಡಲು ಇರುವ ಕಾಯ್ದೆಯೇ ಹೊರತು ತೆಗೆದು ಹಾಕುವ ಕಾಯ್ದೆಯಲ್ಲ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಶ್ವನಾಥ್‌ ಭಟ್‌ ಸ್ಪಷ್ಟಪಡಿಸಿದರು.

Advertisement

ನಗರದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಶುಕ್ರವಾರ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆ ಬಿಜೆಪಿ ಪ್ರಮುಖರು, ಕಾರ್ಯಕರ್ತರಿಗೆ ಆಯೋಜಿಸಿದ್ದ ಪೌರತ್ವ ಕಾಯಿದೆ-2019 ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬಹಳ ಹಿಂದೆಯೇ ಗಾಂಧೀಜಿ ಕೂಡಾ ಅಕ್ಕಪಕ್ಕದ ರಾಷ್ಟ್ರಗಳ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಬಗ್ಗೆ ಮಾತನಾಡಿದ್ದಾರೆ. ನೆಹರೂ ಕೂಡಾ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡಾ ಪೌರತ್ವ ನೀಡುವ ಬಗ್ಗೆ ಮಾತನಾಡಿದ್ದಾರೆ.

ಆದರೆ ಆಗ ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮತ್ತು ಭಾರತ ವಿಭಜಿಸದಿದ್ದರೆ ಇಂದು ಪೌರತ್ವದ ಸಮಸ್ಯೆಯೇ ಬರುತ್ತಿರಲಿಲ್ಲ. ದೇಶವನ್ನು ಧರ್ಮದ ಆಧಾರದ ಮೇಲೆ ಇಬ್ಭಾಗ ಮಾಡುವುದರಲ್ಲಿ ಮುಸ್ಲಿಂ ಲೀಗ್‌ ಎಷ್ಟು ಕಾರಣವೋ ಕಾಂಗ್ರೆಸ್‌ ಕೂಡಾ ಅಷ್ಟೆ ಜವಾಬ್ದಾರಿ ಹೊಂದಿದೆ. ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಮಾಡಿಕೊಂಡು ಹೋದವರು ಆ ದೇಶದ ರಾಷ್ಟ್ರೀಯ ಧರ್ಮ ಇಸ್ಲಾಂ ಎಂದು ಕರೆದುಕೊಂಡರು. ಆದರೆ, ನಾವು ಹಾಗೆ ಮಾಡದೇ ಜಾತ್ಯತೀತ ರಾಷ್ಟ್ರ ಎಂದು ಕರೆದುಕೊಂಡಿದ್ದೇದ್ದೇವೆ ಎಂದು ತಿಳಿಸಿದರು.

1971ರಲ್ಲಿ ಇಂದಿರಾ ಗಾಂಧಿ  ಅವರು ಈ ಕಾಯ್ದೆ ಅನುಷ್ಠಾನ ಮಾಡಿದ್ದರು. ಮುಸ್ಲಿಮರು, ಹಿಂದುಗಳು ಎನ್ನದೇ ಎಲ್ಲರಿಗೂ ಪೌರತ್ವ ನೀಡಿದ್ದಾರೆ. ರಾಜೀವ್‌ ಗಾಂಧಿ  ಅಧಿಕಾರಕ್ಕೆ ಬಂದಾಗ ಉಗಾಂಡದಿಂದ ಬಂದವರಿಗೆ ಪೌರತ್ವ ನೀಡಿದ್ದಾರೆ. ಆದರೆ ಪಾಕಿಸ್ತಾನದಿಂದ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ರಾತ್ರಿ ಬೆಳಗಾಗುವುದರಲಿ ಕಾಯ್ದೆ ಜಾರಿಗೊಳಿಲ್ಲ, 2014ರ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಲಾಗಿತ್ತು. ಪೌರತ್ವ ಕಾಯ್ದೆ ಅನುಷ್ಠಾನಕ್ಕೂ ಮುನ್ನ ಗೃಹ ಸಚಿವ ಅಮಿತ್‌ ಶಾ ಅವರು ಸುಮಾರು 140 ಎನ್‌ಜಿಒಗಳು. ದೇಶದ ಎಲ್ಲ ಮುಖ್ಯಮಂತ್ರಿಗಳ ಜೊತೆ, ಎಲ್ಲ ರಾಜಕೀಯ ಪಕ್ಷಗಳ ಜೊತೆ 191 ಗಂಟೆಗಳ ಕಾಲ ಚರ್ಚಿಸಿ ಅದರ ಪ್ರಮುಖ ಅಂಶಗಳನ್ನು ಕ್ರೂಢಿಕರಿಸಿ ಕಾಯ್ದೆಯಾಗಿಸಿದ್ದಾರೆ ಎಂದರು.

Advertisement

1947ರಲ್ಲಿ ನೆರೆಯ ಪಾಕಿಸ್ತಾನದಲ್ಲಿ ಶೇ.80ರಷ್ಟಿದ್ದ ಮುಸ್ಲಿಮರು ಈಗ ಶೇ.97ಕ್ಕೆ ಬಂದಿದ್ದಾರೆ. ಅದೇ ರೀತಿ ಶೇ.13ರಷ್ಟಿದ್ದ ಹಿಂದೂಗಳು, ಈಗ ಶೇ.1.6ಕ್ಕೆ ಕುಸಿದಿದ್ದಾರೆ. ಆ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯ ಏರಿಕೆ ಕಂಡರೆ, ಹಿಂದುಗಳ ಸಂಖ್ಯೆ ಕ್ಷೀಣಿಸಿದೆ. ಅಲ್ಲಿನ ಹಿಂದುಗಳ ಮೇಲೆ ಅತ್ಯಾಚಾರ, ಕೊಲೆ, ಬಲತ್ಕಾರಗಳೇ ಪ್ರಮುಖ ಕಾರಣ.

ಬಾಂಗ್ಲಾದೇಶದಲ್ಲಿ 1951ರಲ್ಲಿ ಶೇ.22ರಷ್ಟಿದ್ದ ಹಿಂದೂಗಳು ಈಗ ಶೇ.7ಕ್ಕೆ ತಲುಪಿದ್ದಾರೆ ಎಂದರು. ಪೌರತ್ವ ಕಾಯ್ದೆ ಅನುಷ್ಠಾನದಿಂದ ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಅನಾಹುತಗಳು ಸಂಭವಿಸುತ್ತಿವೆ. ಇದರಿಂದ ಸುಮಾರು 10 ಲಕ್ಷ ಕೋಟಿ ನಷ್ಟ
ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಈ ಹಣದಿಂದ ಸುಮಾರು 70 ಲಕ್ಷ ಮನೆಗಳನ್ನು ನಿರ್ಮಿಸಬಹುದಿತ್ತು. 6 ಕೋಟಿ ಜನರಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸಬಹುದಾಗಿತ್ತು ಎಂದರು.

ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್‌ ಮಾತನಾಡಿ, ಕಳೆದ 6 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಶಾಸನಗಳನ್ನು ರೂಪಿಸಿದೆ. ಆದರೆ ವಿರೋಧ ಪಕ್ಷಗಳಿಗೆ ಎಲ್ಲಿಯೂ ಆಡಳಿತ ಪಕ್ಷದ ವಿರುದ್ಧ ತಿರುಗಿ ಬೀಳುವ ಪ್ರಮೇಯವೇ ಬರಲಿಲ್ಲ. ಆದರೆ ಪೌರತ್ವ ಕಾಯ್ದೆಯಿಂದ ವಿರೋಧ ಪಕ್ಷಗಳು ಒಂದು ವರ್ಗವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಕಾಯ್ದೆಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಗ್ಗೆ ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು ತೆರಳಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ| ಲಿಂಗಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್‌, ರಾಮಪ್ಪ, ಬವಸರಾಜ ನಾಯ್ಕ, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ ಮತ್ತಿತರಿದ್ದರು.

ಬಿಜೆಪಿ ಸರ್ಕಾರ ರಾತ್ರಿ ಬೆಳಗಾಗುವುದರಲ್ಲಿ ಕಾಯ್ದೆ
ಜಾರಿಗೊಳಿಲ್ಲ, 2014ರ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಲಾಗಿತ್ತು. ಪೌರತ್ವ ಕಾಯ್ದೆ ಅನುಷ್ಠಾನಕ್ಕೂ ಮುನ್ನ ಗೃಹ ಸಚಿವ ಅಮಿತ್‌ ಶಾ ಅವರು ಸುಮಾರು 140 ಎನ್‌ ಜಿಒಗಳು. ದೇಶದ ಎಲ್ಲ ಮುಖ್ಯಮಂತ್ರಿಗಳ ಜೊತೆ, ಎಲ್ಲ ರಾಜಕೀಯ ಪಕ್ಷಗಳ ಜೊತೆ
191 ಗಂಟೆಗಳ ಕಾಲ ಚರ್ಚಿಸಿ ಅದರ ಪ್ರಮುಖ ಅಂಶಗಳನ್ನು ಕ್ರೊಡೀಕರಿಸಿ ಕಾಯ್ದೆಯಾಗಿಸಿದ್ದಾರೆ.
ವಿಶ್ವನಾಥ್‌ ಭಟ್‌,
ರಾಜ್ಯ ಸಂಚಾಲಕರು,
ಬಿಜೆಪಿ ಆರ್ಥಿಕ ಪ್ರಕೋಷ್ಠ

Advertisement

Udayavani is now on Telegram. Click here to join our channel and stay updated with the latest news.

Next