Advertisement

ಬಿಜೆಪಿ ರ‍್ಯಾಲಿ ಒಂದು ದಿನ ಮುಂದಕ್ಕೆ

05:03 PM Apr 06, 2019 | Naveen |

ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಏ.8 ರಂದು ಆಗಮಿಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಏ.9 ರಂದು ಮಧ್ಯಾಹ್ನ 1 ಗಂಟೆಗೆ ಬರಲಿದ್ದು ಬೃಹತ್‌ ಚುನಾವಣಾ ರ‍್ಯಾಲಿ ಒಂದು ದಿನಕ್ಕೆ ಮುಂದೂಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ತಿಳಿಸಿದರು.

Advertisement

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಚಿತ್ರದುರ್ಗ ಜಿಲ್ಲೆಯಿಂದ 70 ಸಾವಿರಕ್ಕೂ ಅಧಿಕ ಜನ ಸೇರಲಿದ್ದಾರೆ. 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗೊಂದಲಗಳಿಗೆ  ವಕಾಶವಿಲ್ಲದಂತೆ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ ಎಂದರು.

ಬಿಜೆಪಿ ಮುಖಂಡರಾದ ಆರ್‌. ಅಶೋಕ್‌, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್‌ ಪೂಜಾರಿ ಹಾಗೂ ಮೂರು ಕ್ಷೇತ್ರಗಳ ವ್ಯಾಪ್ತಿಯ 14 ಶಾಸಕರು, ವಿಧಾನ ಪರಿಷತ್‌ ಸದಸ್ಯರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಅಂಗವಾಗಿ ಸೂಕ್ತ ಭದ್ರೆತೆ ಒದಗಿಸಲು ಪೊಲೀಸ್‌ ಮತ್ತು ಎಸ್‌.ಪಿ.ಜಿ.ಯವರು ಪರಿಶೀಲನೆ ಆರಂಭಿಸಿದ್ದಾರೆ
ಎಂದು ತಿಳಿಸಿದರು.

ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಕುಡಿಯುವ ನೀರು, ಮೋದಿ ವೀಕ್ಷಿಸಲು ಬರುವವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳವರಿಗೆ, ಗಣ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಪಾಸ್‌ ವಿತರಿಸಲಾಗುವುದು ಎಂದರು.

ತೀವ್ರ ಬಿಸಿಲು ಇರುವುದರಿಂದ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿದ್ದು, ಪೆಂಡಾಲ್‌ ಒಳಗಡೆ 50 ಸಾವಿರ ಕುರ್ಚಿಗಳನ್ನು ಹಾಕಲಾಗುವುದು. ಜೊತೆಯಲ್ಲಿ ಬೃಹತ್‌ ಪ್ರಮಾಣದ ಎಲ್‌.ಇ.ಡಿ
ಪರದೆ ಅಳವಡಿಸಲಾಗುತ್ತಿದ್ದು ಆ ಮೂಲಕ ಮೋದಿರವರ ಭಾಷಣ ಕೇಳುವ ಮತ್ತು ಮೋದಿ ನೋಡುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

Advertisement

ತುಮಕೂರು ಕಡೆಯಿಂದ ಬರುವ ವಾಹನಗಳಿಗೆ ಐಯುಡಿಪಿ ಲೇಔಟ್‌ ಸಮೀಪದ ಗಾಂಧಿ ನಗರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. ಚಳ್ಳಕೆರೆ, ಪಾವಗಡ ಕಡೆಯಿಂದ ಬರುವ ವಾಹನಗಳಿಗೆ ಚಳ್ಳಕೆರೆ ರಸ್ತೆಯ ಪಾಲಿಟೆಕ್ನಿಕ್‌ ಕಾಲೇಜು ಮುಂಭಾಗ, ದಾವಣಗೆರೆ, ಹೊಳಲ್ಕೆರೆ, ಹೊಸದುರ್ಗದ
ಕಡೆಯಿಂದ ಬರುವ ವಾಹನಗಳಿಗೆ ತುರುವನೂರು ರಸ್ತೆಯ ಪೆಟ್ರೋಲ್‌ ಬಂಕ್‌ ಮೈದಾನದಲ್ಲಿ ಪಾರ್ಕಿಂಗ್‌ಗೆ ಅನುಕೂಲ ಕಲ್ಪಿಸಲಾಗುವುದು. ರ‍್ಯಾಲಿ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಅಗ್ನಿಶಾಮಕ ದಳದ ವಾಹನಗಳಿರುತ್ತವೆ. ಒಂದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ರ‍್ಯಾಲಿಯಲ್ಲಿ ಕೆಲಸ ಮಾಡುವರು ಎಂದರು.

ಪ್ರಧಾನಿ ನರೇಂದ್ರಮೋದಿರವರು ಮಧ್ಯಾಹ್ನ ಒಂದು ಗಂಟೆಗೆ ಆಗಮಿಸಿ ಅಲ್ಲಿಂದ ಒಂದುವರೆ ಗಂಟೆಗಳ ಕಾಲ ಚಿತ್ರದುರ್ಗದಲ್ಲಿದ್ದು, ನಂತರ ಮ್ಯಸೂರಿಗೆ ತೆರಳುವರು ಎಂದು ತಿಳಿಸಿದರು. ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಈಗಾಗಲೆ ಶಿರಾ, ನಾಯಕನಹಟ್ಟಿ, ತಳಕು, ಮೊಳಕಾಲ್ಮೂರು, ರಾಂಪುರದಲ್ಲಿ ಬಿರುಸಿನ ಮತಯಾಚನೆ ಕೈಗೊಂಡಿದ್ದಾರೆ. ಏ. 6ರಂದು ಚಿತ್ರದುರ್ಗದಲ್ಲಿ ವಿವಿಧ ದೇವಸ್ಥಾನ, ಧಾರ್ಮಿಕ ಗುರುಪೀಠಗಳ ಸ್ವಾಮೀಜಿಗಳು, ಸಂಘ ಪರಿವಾರದ ಪ್ರಮುಖರನ್ನು ಭೇಟಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಖಂಡನೆ: ಚುನಾವಣಾ ಆಯೋಗ ಸ್ವಯಂ ಪ್ರೇರಿತವಾಗಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಲಾಗುತ್ತದೆ. ಕೂಡಲೇ ಪ್ರಕರಣ ವಾಪಸ್‌ ಪಡೆಯುವಂತೆ ಆಯೋಗಕ್ಕೆ ಒತ್ತಾಯ ಮಾಡಿದರು. ಈ ಪ್ರಕರಣದ ಹಿಂದೆ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿರವರ ಕೈವಾಡವಿದೆ ಎಂದು ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಇಂತಹ ಕೀಳು ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಕೆಲವರು ಸಮುದಾಯಗಳ ಮಧ್ಯೆ ಬಿರುಕು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಗುರುಗಳ ಹೆಸರನ್ನು ಬಳಸುವ ರಾಜಕಾರಣ ನಮ್ಮದಲ್ಲ. ವಿರೋ ಧಿಗಳು ಈ ಕೂಡಲೇ ಸುಳ್ಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಸಹ ಪ್ರಭಾರಿ ಜಿ.ಎಂ. ಸುರೇಶ್‌, ಚಿತ್ರದುರ್ಗ ಲೋಕಸಭಾ ಚುನಾವಣೆ ಸಂಚಾಲಕ ಟಿ.ಜಿ.ನರೇಂದ್ರನಾಥ್‌, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್‌, ಮುರಳಿ, ವಕ್ತಾರ ನಾಗರಾಜ್‌ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next