Advertisement

ಬಸವ ತತ್ವ ಸರ್ವ ಕಾಲಕ್ಕೂ ಪ್ರಸ್ತುತ: ಜಿಲ್ಲಾಧಿಕಾರಿ

01:32 PM May 08, 2019 | Naveen |

ಚಿತ್ರದುರ್ಗ: ದೇಶದ ಇತಿಹಾಸವನ್ನು ಗಮನಿಸಿದಾಗ 12ನೇ ಶತಮಾನದ ಕಾಲಘಟ್ಟದಲ್ಲಿ ಭಕ್ತಿಯ ಚಿಂತನೆ ಉತ್ತುಂಗ ಸ್ಥಿತಿಯಲ್ಲಿತ್ತು ಎಂಬುದು ತಿಳಿದು ಬರುತ್ತದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಬಸವ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಸಾಮಾಜಿಕ ಚಿಂತನೆಯನ್ನಾಗಿ ಮಾಡಿದವರು ಬಸವಣ್ಣನವರು. ಭಾರತದಲ್ಲಿ 10 ರಿಂದ 11ನೇ ಶತಮಾನದ ಕಾಲಘಟ್ಟ ಭಕ್ತಿ ಚಿಂತನೆ ಉತ್ತುಂಗದಲ್ಲಿತ್ತು. ಭಕ್ತಿ ಭಾವ ಸಮಾಜದಲ್ಲಿ ಬೀರಿದ ಪ್ರಭಾವದಿಂದ ಅನೇಕ ದಾರ್ಶನಿಕರು ಜನರ ಮನಸ್ಸಿನ ಮೇಲೆ ಭಕ್ತಿಯ ಭಾವನೆ ಬೀರಿದರು. ಆದರೆ 12ನೇ ಶತಮಾನದಲ್ಲಿ ಬಸವಣ್ಣನವರು ಹಾಕಿದ ಹಲವಾರು ಕ್ರಾಂತಿಕಾರಿ ಹೆಜ್ಜೆಗಳಿಂದ, ಭಕ್ತಿ ಭಾವನೆ, ಸಾಮಾಜಿಕ ಚಿಂತನೆಯತ್ತ ಜನರನ್ನು ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಹೀಗಾಗಿ 12 ನೇ ಶತಮಾನ ದೇಶದ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲಘಟ್ಟವಾಗಿದ್ದು, ಜಾತಿ, ಧರ್ಮಗಳ ಭೇದ ಭಾವ ತೊಡೆದು ಹಾಕಲು ಮಹತ್ವದ ವೇದಿಕೆಯಾಯಿತು. ಅಷ್ಟೇ ಅಲ್ಲ, ಪುರುಷ ಪ್ರಧಾನ ಸಮಾಜವನ್ನು ಸಮಾನತೆಯ ಸಮಾಜದತ್ತ ಕೊಂಡೊಯ್ಯಲು ನಾಂದಿ ಹಾಡಿತು ಎಂದರು.

ಬಸವಣ್ಣನವರ ವಚನಗಳು ಕನ್ನಡ ಭಾಷೆಯಲ್ಲಿ ಅತ್ಯಂತ ಸರಳವಾಗಿ ಇದ್ದ ಕಾರಣಕ್ಕಾಗಿ ಜನಸಾಮಾನ್ಯರಿಗೆ ಬಹು ಬೇಗ ಇಷ್ಟವಾಯಿತಲ್ಲದೆ ಎಲ್ಲೆಡೆ ತಲುಪಲು ಸಾಧ್ಯವಾಯಿತು. ಬಸವಣ್ಣನವರ ತತ್ವ ಹಾಗೂ ಆದರ್ಶ ಸಿದ್ಧಾಂತಗಳು ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತವೆನಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಮಹಾತ್ಮ ಗಾಂಧೀಜಿ, ಬಸವಣ್ಣನಂತಹವರು ನಿಜಕ್ಕೂ ಇದ್ದರೇ ಎಂದು ಮುಂದಿನ ವರ್ಷಗಳಲ್ಲಿ ನಮ್ಮ ಮಕ್ಕಳು ಪ್ರಶ್ನಿಸುವಂತಹ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ. ಆದ್ದರಿಂದ ಸಂಕುಚಿತ ಮನೋಭಾವ ಬಿಟ್ಟು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.

Advertisement

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಮಹಾಂತೇಶ್‌, ಜಾತಿ ಪದ್ಧತಿ ವಿರೋಧಿಸಿ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದ ಬಸವಣ್ಣನವರು ವೈಚಾರಿಕತೆಯನ್ನು ಬಿಂಬಿಸಿದರು. ಹೀಗಾಗಿ ಬಸವಣ್ಣನವರು ಪರ್ಯಾಯ ಬುದ್ಧ ಎಂಬುದರಲ್ಲಿ ಅನುಮಾನವಿಲ್ಲ. 9 ಶತಮಾನಗಳ ಹಿಂದೆ ಬಸವಣ್ಣನವರು ಹುಟ್ಟಿದಾಗ ನಮ್ಮ ನಾಡಿನ ಸಮಾಜದ ಚಿತ್ರಣ ಬೇರೆಯೇ ಆಗಿತ್ತು. ಹಲವು ಮೂಢನಂಬಿಕೆಗಳು, ಜಾತಿ ಪದ್ಧತಿಗಳಿದ್ದವು. ಬಸವಣ್ಣನವರು ಜಡ್ಡುಗಟ್ಟಿದ ಸಮಾಜದಲ್ಲಿ ಚುರುಕು ಮೂಡಿಸಿ ಸತ್ಯ, ಸರಳತೆ, ಸಜ್ಜನಿಕೆಯನ್ನು ಪರಿಚಯಿಸಿದರು ಎಂದರು.

ಬಸವಣ್ಣ ರೂಪಿಸಿದ ಅನುಭವ ಮಂಟಪದ ವ್ಯವಸ್ಥೆ ಇಡೀ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಕಲ್ಯಾಣ ಕ್ರಾಂತಿಯ ಬಳಿಕ ಇದುವರೆಗೂ ಬಸವಣ್ಣನವರ ಸುಮಾರು 1500 ವಚನಗಳು ಮಾತ್ರ ದೊರೆತಿವೆ. ಅಲ್ಲಮಪ್ರಭು, ಮಡಿವಾಳ ಮಾಚಿದೇವರು ಸೇರಿದಂತೆ ಹಲವರು ವಚನ ಸಾಹಿತ್ಯವನ್ನು ಉಳಿಸಲು ಶ್ರಮಿಸಿದರು ಎಂದು ಹೇಳಿದರು.

ಬಸವಣ್ಣನವರ ವಚನ ತತ್ವಗಳಿಗೆ ವ್ಯತಿರಿಕ್ತವಾಗಿ ಸಮಾಜದಲ್ಲಿ ಜಾತಿ, ಧರ್ಮ ಎನ್ನುವ ಭೇದ ಭಾವ ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಬಸವಣ್ಣನವರ ತತ್ವ ಸಂದೇಶಗಳು ಸರ್ವ ಕಾಲಕ್ಕೂ ಸಲ್ಲುತ್ತವೆ. ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಸವಣ್ಣನವರನ್ನು ಗೌರವಿಸಿದಂತೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ಡಿಡಿಪಿಐ ಆಂಥೋನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮೊದಲಾದವರು ಭಾಗವಹಿಸಿದ್ದರು. ವಿವಿಧ ಕಲಾವಿದರು ಬಸವಣ್ಣನವರ ವಚನ ಗಾಯನವನ್ನು ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next