ಚಿತ್ರದುರ್ಗ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ 15 ಜನರು ಗಾಯಗೊಂಡ ಘಟನೆ ಹಿರಿಯೂರು ತಾಲೂಕಿನ ಕಪಿಲೆಹಟ್ಟಿ ಗ್ರಾಮದ ಬಳಿ ನಡೆದಿದೆ.
ಬೆಳಗಿನ ಜಾವ ಅಪಘಾತ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್ ಹೊತ್ತಿ ಉರಿದಿದೆ. ಲಾರಿ ಚಾಲಕ ವೆಂಕಟೇಶ್ (40) ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ಸಿನಲ್ಲಿದ್ದ 15 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಚಳ್ಳಕೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಈಚರ್ ಲಾರಿ ನಡುವೆ ನಸುಕಿನಲ್ಲಿ ಅಪಘಾತ ಸಂಭವಿಸಿದ್ದು, ಘಟನೆ ನಡೆದ ತಕ್ಷಣ ಎಲ್ಲ ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದಾರೆ. ಆನಂತರ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.