ಚಿತ್ರದುರ್ಗ: ಅಧಿಕಾರ ವಿಕೇಂದ್ರಿಕರಣ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡಿರುವ ಜಿಲ್ಲಾ, ತಾಲೂಕು ಹಾಗೂ ಗ್ರಾಪಂಗಳ ಪೈಕಿ ತಾಪಂ ಹೆಚ್ಚು ಚರ್ಚೆಗೆ ಬರುತ್ತಿದೆ. ಇತ್ತೀಚೆಗೆ ಡಿಸಿಎಂ ಗೋವಿಂದ ಕಾರಜೋಳ ತಾಪಂ ರದ್ದತಿ ಬಗ್ಗೆ ಪ್ರಸ್ತಾಪಿಸಿದ ನಂತರ ಈ ಬಗ್ಗೆ ಚರ್ಚೆ ಜೋರಾಗಿದೆ. ಅನೇಕ ಸಲ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಲ್ಲೇ ಸದಸ್ಯರು ಅನುದಾನವಿಲ್ಲ, ಅಧಿಕಾರವಿಲ್ಲ. ಮತ ಹಾಕಿದ ಜನರಿಗೆ ಏನಂತ ಹೇಳಲಿ ಎಂದು ಚರ್ಚೆ ನಡೆಸಿದ್ದೂ ಇದೆ. ಇದೇ ಕಾರಣಕ್ಕೆ ತಾಪಂ ಅನ್ನು ರದ್ದು ಮಾಡಿಬಿಡಿ, ಇದರಿಂದ ಸರ್ಕಾರಕ್ಕೆ ಒಂದಿಷ್ಟು ಹೊರೆ ಕಡಿಮೆಯಾಗುತ್ತದೆ ಎಂಬ ಬೇಸರದ ಮಾತುಗಳು, ಇದರೊಟ್ಟಿಗೆ ತಾಪಂ ಅನ್ನು ಬಲಗೊಳಿಸಿ ಅಧಿಕಾರ ವಿಕೇಂದ್ರಿಕರಣದ ಆಶಯ ಈಡೇರಿಸಿ ಎಂಬ ಸದಾಶಯದ ಮಾತುಗಳೂ ಕೇಳಿ ಬರುತ್ತಿವೆ.
ತಾಲೂಕು ಬೋರ್ಡ್‌ನಿಂದ ತಾಪಂವರೆಗೆ: ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದ ಅವ ಧಿಯಲ್ಲಿ ಸಚಿವರಾಗಿದ್ದ ನಜೀರ್ ಸಾಹೇಬರು ಮಂಡಲ್ ಪಂಚಾಯತ್, ತಾಲೂಕು ಬೋರ್ಡ್ ಹಾಗೂ ಜಿಲ್ಲಾ ಪರಿಷತ್ ವ್ಯವಸ್ಥೆ ಜಾರಿಗೆ ತಂದಿದ್ದರು. ಮೊದಲು ತಾಲೂಕು ಬೋರ್ಡ್ ಗೆ ಆಯಾ ತಾಲೂಕಿನ ಶಾಸಕರೇ ಅಧ್ಯಕ್ಷರಾಗಿರುತ್ತಿದ್ದರು. ಮಂಡಲ್ ಪಂಚಾಯಿತಿ ಅಧ್ಯಕ್ಷರು ಸದಸ್ಯರಾಗಿರುತ್ತಿದ್ದರು. ಆದರೆ ಎಲ್ಲವೂ ಶಾಸಕರ
ಕೇಂದ್ರೀಕೃತವಾಗಿದ್ದ ಕಾರಣಕ್ಕೆ ಈ ವ್ಯವಸ್ಥೆ ಮತ್ತೆ ಬದಲಾವಣೆ ಕಂಡಿತು. ದಿ| ರಾಜೀವ್ ಗಾಂಧಿ , ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದ ಅವರ ಅಧಿಯಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ದೇಶಾದ್ಯಂತ ಮೂರು ಹಂತದ ಪಂಚಾಯಿತಿ ವ್ಯವಸ್ಥೆ ಜಾರಿಗೆ ತಂದರು. ಈ ಮಾದರಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಆಯ್ಕೆಯಾಗುವಂತಾಯಿತು.
ತಾಪಂಗೆ ಅಧಿಕಾರ ಇಲ್ಲ ಎನ್ನುವುದೇ ತಪ್ಪು. ಅನುದಾನವೇ ಅಧಿಕಾರವಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಅಧಿಕಾರಿಗಳ ಜತೆ ವಿಶ್ವಾಸ ಬೆಳೆಸಿಕೊಂಡು ಜನರ ಕೆಲಸ ಮಾಡಬಹುದು. ತಾಪಂ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷರು ಇಡೀ 32 ಇಲಾಖೆಗಳ ಪರಿಶೀಲನೆ ಮಾಡಬಹುದು. ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಬಹುದು. ಇದನ್ನು ರದ್ದು ಮಾಡುವುದರಿಂದ ಅಥವಾ ಹಾಗೆಯೇ ಇಡುವುದರಿಂದ ಸರ್ಕಾರಕ್ಕೆ ಲಾಭ, ನಷ್ಟ ಎರಡೂ ಇಲ್ಲ. ಯಾವ ತಾಪಂ ಅಧ್ಯಕ್ಷರಿಗೂ ಸರ್ಕಾರ ಕಾರು ಕೊಟ್ಟಿಲ್ಲ. ಗೌರವಧನ ಮಾತ್ರ ಇದೆ. ಅಧಿಕಾರವೇ ಮುಖ್ಯ ಎನ್ನುವುದಾದರೆ ಶಾಸಕರು, ಮಂತ್ರಿಯಾಗಬೇಕು, ಮಂತ್ರಿ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದ್ದೇ ಇರುತ್ತೆ. ಈಗ ಇರುವ ವ್ಯವಸ್ಥೆ ಸರಿಯಾಗಿದ್ದು, ಅಭಿವೃದ್ಧಿ ಕೆಲಸ ಮಾಡುವ ಮನಸ್ಸು ಬೇಕಷ್ಟೇ. ಲಿಂಗರಾಜು, ಚಿತ್ರದುರ್ಗ ತಾಪಂ ಅಧ್ಯಕ್ಷ ನೇರವಾಗಿ ಜಿಲ್ಲಾ ಪಂಚಾಯಿತಿಯಿಂದಲೇ ಎಲ್ಲ ಕೆಲಸಗಳನ್ನೂ ಮಾಡಿಸಲು ಆಗಲ್ಲ. ಗ್ರಾಪಂ ಹಾಗೂ ಜಿಪಂ ನಡುವೆ ತಾಪಂ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಸಣ್ಣಪುಟ್ಟದಕ್ಕೂ ಜಿಪಂಗೆ ಹೋಗಿ ಬರಲು ಆಗಲ್ಲ. ಈಗಿರುವ ವ್ಯವಸ್ಥೆಯೇ ಚೆನ್ನಾಗಿದೆ. ಆದರೆ ಶಾಸಕರ ಕೇಂದ್ರಿಕೃತವಾಗಿರುವ ಅನುದಾನ, ಸೌಲಭ್ಯಗಳನ್ನು ತಾಪಂ ವ್ಯಾಪ್ತಿಗೂ ನೀಡಿದರೆ ಚೆನ್ನಾಗಿರುತ್ತದೆ.
ಕೆ. ತಿಪ್ಪೇಸ್ವಾಮಿ,
ಚಳ್ಳಕೆರೆ ತಾಲೂಕು ಪಂಚಾಯತ್ ಅಧ್ಯಕ್ಷ
ದುಡ್ಡೇ ದೊಡ್ಡಪ್ಪ ಅಲ್ಲ. ಲಾಲ್ ಬಹದ್ದೂರ್ ಶಾಸ್ತ್ರೀ ದೇಶದ ಪ್ರಧಾನಿಯಾಗಿದ್ದರೂ ಬಾಡಿಗೆ ಮನೆಯಲ್ಲಿದ್ದರು. ಜನರ ಕೆಲಸ ಮಾಡುವ ಇಚ್ಛಾಶಕ್ತಿ ಮುಖ್ಯ. ತಾಲೂಕು ಮಟ್ಟದಲ್ಲಿ ಜನಪ್ರತಿನಿ ಧಿಗಳಿದ್ದರೆ ಅನುಕೂಲ. ಜನಸಾಮಾನ್ಯರು ಅಧಿಕಾರಿಗಳ ಬಳಿ ಹೋಗುವುದು ಕಷ್ಟ. ಈ ನಿಟ್ಟಿನಲ್ಲಿತಾಲೂಕು ಮಟ್ಟದಲ್ಲಿ ಪ್ರತಿನಿ ಧಿಗಳಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಬಹುದು. ಈಗಿರುವ ವ್ಯವಸ್ಥೆ ಚೆನ್ನಾಗಿದ್ದು, ಮುಂದುವರೆಸುವುದು ಒಳ್ಳೆಯದು.
ಬೋರಮ್ಮ ಪಾಲಯ್ಯ,
ಮೊಳಕಾಲ್ಮೂರು ತಾಪಂ ಅಧ್ಯಕ್ಷೆ
-ತಿಪ್ಪೇಸ್ವಾಮಿ ನಾಕೀಕೆರೆ