Advertisement

ಮಲ್ಲಿಕಾರ್ಜುನ ಶ್ರೀ ಸಾಂಸ್ಕೃತಿಕ ಶ್ರೀಮಂತರು

06:52 PM Aug 09, 2021 | Team Udayavani |

ಹೊಳಲ್ಕೆರೆ: ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಬಡತನದಿಂದ ಬಂದವರು. ಆದರೆ ಸಾಂಸ್ಕೃತಿಕ ಶ್ರೀಮಂತಿಕೆ ಅವರಲ್ಲಿತ್ತು. ಬಂದುಹೋಗುವ ಶ್ರೀಮಂತಿಕೆಗಳು ಕ್ಷಣಿಕ. ಆದರೆ ಶಾಶ್ವತವಾದದ್ದು ಸಾಂಸ್ಕೃತಿಕ ಶ್ರೀಮಂತಿಕೆ ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಪಟ್ಟಣದ ಒಂಟಿಕಂಬದ ಮುರುಘಾಮಠದಲ್ಲಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿರುವ ಮಲ್ಲಿಕಾರ್ಜುನ ಮರುಘಾ ರಾಜೇಂದ್ರ ಸ್ವಾಮಿಜಿಗಳ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಜಯದೇವ ಮುರುಘರಾಜೇಂದ್ರ ಶ್ರೀಗಳು ಮತ್ತು ಜಯವಿಭವ ಶ್ರೀಗಳು ಈ ಮೂವರ ಆಶೀರ್ವಾದ ಮಲ್ಲಿಕಾರ್ಜುನ ಶ್ರೀಗಳಿಗೆ ಸಿಕ್ಕಿತ್ತು. ನಾವೆಲ್ಲ ಅವರ ಚರಿತ್ರೆಯನ್ನು ಕೇಳುತ್ತಲೆ ದೊಡ್ಡವರಾದವರು.

ಶ್ರೀಗಳ ನೇರವಾದಿತನ ನಮಗೆ ಪ್ರೇರಣೆಯಾಗಿದೆ. 1964ರಲ್ಲಿ ಶ್ರೀಮಠಕ್ಕೆ ಜಗದ್ಗುರುಗಳಾಗಿ ಬಂದ ಅವರು ಅಧ್ಯಾತ್ಮ ಮತ್ತು ಅಭಿವೃದ್ಧಿಯ ದೂರದೃಷ್ಟಿ ಮತ್ತು ದಿವ್ಯದೃಷ್ಟಿ ಮೂಲಕ ಮುರುಘಾಮಠಕ್ಕೆ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಭದ್ರತೆ ನೀಡಿದರು. ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ಚೇತನವಾಗಿ ಬೆಳಗಿದರು ಎಂದು ಸ್ಮರಿಸಿದರು. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಬುದ್ಧಿಜೀವಿಗಳಾದ ನಾವು ಬಸವಣ್ಣನವರ ತತ್ವಾದರ್ಶ ಬೆಳೆಸಿಕೊಳ್ಳಬೇಕು. ಆದರೆ ಇಂದು ಅವರ ತತ್ವಗಳನ್ನು ಆಚರಿಸದಿರುವುದು ದುರಂತ. ಬಸವಾದಿ ಶರಣರ ತತ್ವಗಳು ಇಂದಿನ ದಿನಕ್ಕೆ ಅತಿಮುಖ್ಯ. ಅವು ದೂರವಾದರೆ ನಾವು ದಾರಿ ತಪ್ಪಬಹುದು. ಮಲ್ಲಿಕಾರ್ಜುನ ಜಗದ್ಗುರುಗಳು ದಲಿತರನ್ನು, ಶೋಷಿತರನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು ಎಂದು ಸ್ಮರಿಸಿದರು.

ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಮಾತನಾಡಿ, ಶ್ರೀ ಮಲ್ಲಿಕಾರ್ಜುನ ಮುರಘಾರಾಜೇಂದ್ರ ಜಗದ್ಗುರುಗಳು ಎತ್ತರದಲ್ಲಿದ್ದರು. ಆದರೆ ಮುರುಘಾ ಶರಣರು ಜನರಿಗೆ ಹತ್ತಿರದಲ್ಲಿದ್ದಾರೆ. ಅವರು ಗಂಭೀರ ವ್ಯಕ್ತಿತ್ವದವರು. ಅವರು ದೂರದೃಷ್ಟಿಯುಳ್ಳವರು. ನಮ್ಮ ನಾಡು, ಸಮಾಜ ಇಂದು ಗಟ್ಟಿಯಾಗಿದೆ ಎಂದರೆ ನಮ್ಮಲ್ಲಿ ಬಂದುಹೋಗಿರುವ ಜಗದ್ಗುರುಗಳೇ ಮುಖ್ಯ ಕಾರಣ ಎಂದು ತಿಪಟೂರಿನ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳು ಶ್ರೇಷ್ಟರಲ್ಲಿ ಶ್ರೇಷ್ಠರು.

ಅವರನ್ನು ಮೀರಿಸುವ ಜಗದ್ಗುರುಗಳು ರಾಜ್ಯದಲ್ಲಿ ಯಾರೂ ಇರಲಿಲ್ಲ. ಸುತ್ತೂರು ಶ್ರೀಗಳಿಗೆ ಮಲ್ಲಿಕಾರ್ಜುನ ಶ್ರೀಗಳಿಂದ ಕಿರೀಟಧಾರಣೆ ಮಾಡಿಸುತ್ತಾರೆ. ಅಂತಹ ವಿದ್ವತ್ತು ಶ್ರೀಗಳದಾಗಿತ್ತು ಎಂದು ತಿಳಿಸಿದರು. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ, ಒಬ್ಬರ ಕಾಲಮಾನ ಇನ್ನೊಬ್ಬರ ಕಾಲಮಾನಕ್ಕೆ ಬರಬೇಕೆಂದರೆ ಪ್ರಸ್ತುತ ಇರುವವರು ಸಮರ್ಥರಾಗಿರಬೇಕು. ಹಿರಿಯ ಜಗದ್ಗುರುಗಳು ಸಂಸ್ಕೃತದಲ್ಲಿ ಪಂಡಿತರು. ಸಂಸ್ಕೃತ ಪಾಂಡಿತ್ಯವಿರುವ ಮಲ್ಲಿಕಾರ್ಜುನ ಜಗದ್ಗುರುಗಳು ಸಂಸ್ಕಾರ ಇರುವ ಮುರುಘಾ ಶರಣರನ್ನು ಉತ್ತರಾ  ಧಿಕಾರಿಯನ್ನಾಗಿ ಮಾಡಿದರು.

Advertisement

ಕ್ರಾಂತಿಕಾರಿ ಸಂತರನ್ನು ಸಮಾಜಕ್ಕೆ ಕೊಡುಗೆಯಾಗಿ ತಂದರು ಎಂದು ತಿಳಿಸಿದರು. ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶ್ರೀ ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮಿಗಳು, ಮಠದ ಕುರುಬರಹಟ್ಟಿ ಆನಂದಪ್ಪ, ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಸದಸ್ಯರಾದ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಎಸ್‌. ಷಣ್ಮುಖಪ್ಪ ಮೊದಲಾದವರಿದ್ದರು. ಇದಕ್ಕೂ ಮುನ್ನ ಹೊಳಲ್ಕೆರೆ ತಾಲೂಕು ಗಿಲಿಕೇನಹಳ್ಳಿಯ ಎನ್‌.ಟಿ. ನಾಗಪ್ಪ ಮತ್ತು ತಂಡದವರು ಭಜನೆ ನಡೆಸಿಕೊಟ್ಟರು. ಶ್ರೀ ಶಿವಬಸವ ಸ್ವಾಮಿಗಳು ಸ್ವಾಗತಿಸಿದರು. ಡಾ| ಬಸವಕುಮಾರ ಸ್ವಾಮಿಗಳು ನಿರೂಪಿಸಿದರು. ಎಲ್‌.ಬಿ. ರಾಜಶೇಖರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next