Advertisement

ಹೊರ ಗುತ್ತಿಗೆ ಸಿಬ್ಬಂದಿಗೇಕೆ ವೇತನ?

03:23 PM Feb 19, 2021 | |

ಚಿತ್ರದುರ್ಗ: ನರೇಗಾ ಯೋಜನೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವೇತನ ಪಾವತಿ ಮಾಡುತ್ತಿರುವ ಏಜೆನ್ಸಿಯ ಟೆಂಡರ್‌ ರದ್ದು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಪಟ್ಟು ಹಿಡಿದ ಘಟನೆ ನಗರದ ಜಿಲ್ಲಾ ಪಂಚಾಯಿತಿ
ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಈಗಾಗಲೇ ಹಲವು ಸಭೆಗಳಲ್ಲಿ ಈ ವಿಷಯ ಚರ್ಚಿಸಿದರೂ ಕ್ರಮ ಕೈಗೊಂಡಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಖಾಸಗಿ
ಏಜೆನ್ಸಿ ವೇತನ ಪಾವತಿ ಮಾಡುತ್ತಿದೆ. ಇವರಿಗೆ ಅ ಧಿಕಾರ ಕೊಟ್ಟವರು ಯಾರು, ಯಾವಾಗ ಟೆಂಡರ್‌ ಕರೆದಿದ್ದಿರಿ ಎಂದು ಪ್ರಶ್ನೆಗಳ ಸುರಿಮಳೆಗೈದ ಸದಸ್ಯರು,ಈ ಏಜೆನ್ಸಿಯ ಟೆಂಡರ್‌ ಪ್ರಕ್ರಿಯೆ ರದ್ದುಗೊಳಿಸಿ ಎಂದು ಆಗ್ರಹಿಸಿದರು.

ಸದಸ್ಯರಾದ ನರಸಿಂಹರಾಜು, ಕೃಷ್ಣಮೂರ್ತಿ, ನಾಗೇಂದ್ರ ನಾಯ್ಕ, ಡಿ.ಕೆ. ಶಿವಮೂರ್ತಿ ಸುದಿಧೀರ್ಘ‌ ಚರ್ಚೆ ನಡೆಸಿದರು. ಜಿಪ ಸಿಇಒ ಡಾ| ಕೆ. ನಂದಿನಿದೇವಿ ಮಾತನಾಡಿ, ಹೊರಗುತ್ತಿಗೆಯಡಿ ನರೇಗಾ ಕಾಮಗಾರಿ ಅನುಷ್ಠಾನಕ್ಕೆ ಇಂಜಿನಿಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಕೆಲವು ವರ್ಷಗಳಿಂದ ಟೆಂಡರ್‌ ಕರೆಯದೇ ನೇರವಾಗಿ ಒಂದೇ ಸಂಸ್ಥೆಗೆ ಮುಂದುವರಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಟೆಂಡರ್‌ ಕರೆದು ಹೊರಗುತ್ತಿಗೆ ಸಂಸ್ಥೆಯನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇಂದಿನ ಸಭೆಯಲ್ಲಿ ನಡೆದ ಚರ್ಚೆಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರ್‌ಇಡಿ ಕಾಮಗಾರಿಗಳ ತನಿಖೆಗೆ ಸಮಿತಿ: 2019-20ನೇ ಸಾಲಿನಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆ, ಸೇತುವೆ ಹಾಗೂ ಕೆರೆ ಕಾಮಗಾರಿ ಸೇರಿದಂತೆ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಇಲಾಖೆ ವತಿಯಿಂದ ಕೈಗೊಂಡ ಕಾಮಗಾರಿಗಳ ತನಿಖೆಗೆ ಜಿಲ್ಲಾ ಮಟ್ಟದ ಸಮಿತಿ
ರಚಿಸಿ ತನಿಖೆ ಮಾಡಿ ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಸೂಚಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌. ನರಸಿಂಹರಾಜು ಮಾತನಾಡಿ, 2019-20ನೇ ಸಾಲಿನಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಿಗೆ ಮಳೆ ಹಾನಿ ಯೋಜನೆಯಡಿ ಭಾರೀ ಮಳೆಯಿಂದ ಹಾನಿಯಾಗಿರುವ ಒಟ್ಟು 412 ರಸ್ತೆ, ಸೇತುವೆ ಹಾಗೂ ಕೆರೆ ಕಾಮಗಾರಿಗಳಿಗೆ ರೂ.2991.40 ಲಕ್ಷ ಹಣ ಬಿಡುಗಡೆಯಾಗಿತ್ತು. 412 ಕಾಮಗಾರಿಗಳಲ್ಲಿ 293 ಕಾಮಗಾರಿಗಳು ಪೂರ್ಣಗೊಂಡಿದ್ದು, 52 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನೂ ಬಾಕಿ ಉಳಿದ 64 ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ ಎಂದು ಅಧಿ ಕಾರಿಗಳು ವರದಿ ನೀಡಿದ್ದಾರೆ. ಆದರೆ ಅಧಿಕಾರಿಗಳ ವರದಿಯಲ್ಲಿ ಪ್ರಗತಿಯಲ್ಲಿದೆ, ಭೌತಿಕವಾಗಿ ಪೂರ್ಣವಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಪಿಆರ್‌ಇಡಿ ವಿಭಾಗದಿಂದ ಕೈಗೊಂಡಿರುವ 412 ಕಾಮಗಾರಿಗಳಲ್ಲಿ ಎಷ್ಟು ಕಾಮಗಾರಿಗಳಿಗೆ ಸಂಪೂರ್ಣ ಹಣ ಪಾವತಿಯಾಗಿದೆ, ಎಷ್ಟು ಬಾಕಿ ಇದೆ ಎನ್ನುವ ಪೂರ್ಣ ವರದಿ ನೀಡಬೇಕು. ಪಿಆರ್‌ ಇಡಿ ವಿಭಾಗದಿಂದ ಕೈಗೊಂಡಿರುವ ಕಾಮಗಾರಿಗಳ ವಿವರ ಪರಿಪೂರ್ಣವಾಗಿಲ್ಲ. ಹಾಗಾಗಿ ಈ ಕುರಿತು ಜಿಲ್ಲಾ ಮಟ್ಟದ ಸಮಿತಿಯಿಂದ ತನಿಖೆ ಮಾಡಬೇಕು
ಎಂದು ಒತ್ತಾಯಿಸಿದರು.

Advertisement

ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌, ಮಾಹಿತಿ ನೀಡಿ, ಇಲಾಖೆಯಿಂದ ಕೈಗೊಂಡಿರುವ 412 ಕಾಮಗಾರಿಗಳಿಗೆ 2991.40 ಲಕ್ಷ ರೂ.ಗಳಿಗೆ ಅನುಮೋದನೆಯಾಗಿದೆ. 412 ಕಾಮಗಾರಿಗಳಲ್ಲಿ 293 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ ಒಟ್ಟು 3.53 ಕೋಟಿ ರೂ. ಖರ್ಚಾಗಿದೆ. ಉಳಿದಂತೆ 2377.94 ಲಕ್ಷ ರೂ. ಬಿಡುಗಡೆಯಾಗಬೇಕಿದೆ. ಕಳೆದ ಸಾಲಿನಲ್ಲಿ ಇಲಾಖೆಯ ಹಣ ವ್ಯಪಗತವಾಗಿದೆ. ಹಣ ಬಿಡುಗಡೆಯಾದ ನಂತರ ಬಾಕಿ ಉಳಿದ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೌಸಲ್ಯ ತಿಪ್ಪೇಸ್ವಾಮಿ, ತ್ರಿವೇಣಿ ಶಿವಪ್ರಸಾದ್‌ ಗೌಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಓದಿ : ತುಳು ಚಿತ್ರರಂಗ ಉಳಿಯಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು: ದೇವದಾಸ್ ಕಾಪಿಕಾಡ್

Advertisement

Udayavani is now on Telegram. Click here to join our channel and stay updated with the latest news.

Next