ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಈ ಮೂಲಕ ಜಿಲ್ಲೆಯ ಜನರ ಆಕ್ರೋಶದ ಕಟ್ಟೆಯೊಡೆದಿದೆ. ಸಚಿವ ಸ್ಥಾನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಆಸೆಗೆ ಬಿಜೆಪಿ ತಣ್ಣೀರೆರಚಿದೆ.
ಬುಧವಾರ ಬೆಳಗ್ಗೆ 10 ಗಂಟೆವರೆಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವರಾಗುತ್ತಾರೆ ಎನ್ನಲಾಗುತ್ತಿತ್ತು. ಖುದ್ದು ಸಿಎಂ ಕರೆ ಮಾಡಿ ತಿಳಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದವು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂದಾಗ ಜಿಲ್ಲೆಯ ಜನರಿಗೆ ಬೇಸರವಾಯಿತು. ಮಂಗಳವಾರ ಸಂಜೆವರೆಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಹೆಸರು ಕೂಡ ಮುಂಚೂಣಿಯಲ್ಲಿತ್ತು. ತಿಪ್ಪಾರೆಡ್ಡಿ ಖುದ್ದು ದೆಹಲಿಗೆ ತೆರಳಿ ಹೈಕಮಾಂಡ್ ಸಂಪರ್ಕಿಸಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು.
ಆದರೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಎಲ್ಲವನ್ನೂ ತಲೆಕೆಳಗಾಗಿ ಮಾಡಿದೆ. ಬಿಜೆಪಿ ೆಗೆದುಕೊಂಡ ಈ ನಿರ್ಧಾರದಿಂದ ಮುಂದಿನ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಪೆಟ್ಟು ಬೀಳಲಿದ್ದು ಇದರ ಪರಿಣಾಮ ಅನುಭವಿಸಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಗೂಳಿಹಟ್ಟಿ, ಚಂದ್ರಪ್ಪಗೂ ನಿರಾಸೆ: ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ನನಗೆ ಬಿಜೆಪಿಯಲ್ಲಿ ಗಾಡ್‌ಫಾದರ್ ಇಲ್ಲ. ಆದರೆ 2008 ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನಾನು ಕಾರಣನಾಗಿದ್ದೆ. ಆಗ ನನಗೆ ಸಚಿವ ಸ್ಥಾನ ಕೊಟ್ಟು ಕಿತ್ತುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಆಗಿದ್ದ ಅನ್ಯಾಯ ಸರಿಪಡಿಸುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಅದು ಹುಸಿಯಾಗಿದೆ. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಕೂಡ ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದರು.
ಆದರೆ ಜಿಲ್ಲೆಯ ಕೋಟಾದಲ್ಲಿ ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿ ಧಿಸುತ್ತಿರುವ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಿ ಬಿಜೆಪಿ ಕೈ ತೊಳೆದುಕೊಂಡಿದೆ ಎನ್ನುವುದು ಸ್ಪಷ್ಟವಾಗಿದೆ. ಒಟ್ಟಾರೆ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂತ್ರಿ ಸ್ಥಾನ ಹಂಚಿಕೆ ಮಾಡಿರುವ ಬಿಜೆಪಿಯ ಲೆಕ್ಕಾಚಾರ ಜಿಲ್ಲೆಯ ಮಟ್ಟಿಗೆ ಅಸಮಾಧಾನಕ್ಕೆ ಕಾರಣವಾಗಿದೆ.