ಚಿತ್ರದುರ್ಗ: ಶತಮಾನಗಳಿಂದ ತುಳಿತಕ್ಕೊಳಗಾಗಿರುವ ದಲಿತರನ್ನು ಮೇಲೆತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ 70 ವರ್ಷಗಳ ಆಡಳಿತಾವ ಧಿಯಲ್ಲಿ ಕಾಂಗ್ರೆಸ್ ಪಕ್ಷ ದಲಿತರಿಗೆ ದ್ರೋಹ ಬಗೆದಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರೀಬಿ ಹಠಾವೋ ಎಂದು ಜಪ ಮಾಡುತ್ತಿರುವ ಕಾಂಗ್ರೆಸ್‌ನಿಂದ ಬಡತನ ನಿವಾರಣೆಯಾಗಿಲ್ಲ. ದಲಿತರನ್ನು ಸಮಾಧಿ ಮಾಡುತ್ತಿರುವ ಕಾಂಗ್ರೆಸ್ ವಂಚನೆಗೆ ಗುರಿಯಾಗಬೇಡಿ. 178 ಸ್ಥಾನಗಳಿಂದ 78ಕ್ಕೆ ಇಳಿದಿರುವ ಪಕ್ಷ ಕಾಂಗ್ರೆಸ್ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಸಂಹಾರವಾಗುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊಟ್ಟ ಮೊದಲ ಬಾರಿಗೆ 20 ದಲಿತರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿರುವುದು ಚಿತ್ರದುರ್ಗಕ್ಕೆ ಹೆಮ್ಮೆಯ ಸಂಗತಿ. ದೇಶದ ಬೇರೆ ಬೇರೆ ರಾಜ್ಯಗಳಿಗೆ ಎಂಟು ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರಲ್ಲಿ ನಾಲ್ಕು ಜನ ದಲಿತರೇ ಇದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹೊಟ್ ಅವರ ನೇಮಕವಾಗಿರುವುದು ಸಂತಸದ ಸಂಗತಿ ಎಂದರು. ದಲಿತರನ್ನು ಮುಗಿಸುವ ಕುತಂತ್ರ ಮಾಡಿರುವ ಸಿದ್ದರಾಮಯ್ಯ ಕುಚೋದ್ಯದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯಿಂದ ಮಾತ್ರ ದಲಿತರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ.
ಅತಿ ಭ್ರಷ್ಟ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟ ಎಂದು ಹೇಳುವ ಚಟ ಬೆಳೆಸಿಕೊಂಡಿದ್ದಾರೆ. ಆದರೆ ಬಿಎಸ್‌ವೈ ಮೇಲೆ ಬಂದ ಆರೋಪಗಳು ಸಾಬೀತಾಗಿಲ್ಲ ಎಂಬುದನ್ನು ವಿರೋಧಿಗಳು ಮೊದಲು ಅರಿಯಲಿ ಎಂದು ಕುಟುಕಿದರು. ಯತೀಂದ್ರ ಸಿದ್ದರಾಮಯ್ಯ ಗುತ್ತಿಗೆ ನೀಡಿರುವುದು, ಸ್ಟೀಲ್ ಬ್ರಿಡ್ಜ್ ಹಗರಣ ಮುಚ್ಚಿ ಹಾಕಿ ಎಸಿಬಿ ಕತ್ತು ಹಿಸುಕಿದ್ದು, ಡಿವೈಎಸ್ಪಿ ಗಣಪತಿ ಪ್ರಕರಣ ಮುಚ್ಚಿ ಹಾಕಿರುವುದು ಭ್ರಷ್ಟಾಚಾರವೇ ಅಲ್ಲವೇ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ್ ನಾಯ್ಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾಲಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಪಾಂಡು, ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ನಾಗರಾಜ್, ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.