ಚಿತ್ರದುರ್ಗ: ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಅಪಾಯ ತಂದೊಡ್ಡಲಿದೆ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಸ್ಪತ್ರೆಯ ಬಿ.ಸಿ. ರಾಯ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1.20 ಕೋಟಿ ರೂ. ವೆಚ್ಚದಲ್ಲಿ 230 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಕೋವಿಡ್ ರೋಗಿಗಳ ಜೀವ ಉಳಿಸಲು ಈ ಹಿಂದೆ 170 ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಇತ್ತು. ಆದರೆ ಇದು ಸಾಕಾಗಾದ ಕಾರಣ ಈಗ ಹೆಚ್ಚುವರಿಯಾಗಿ 230 ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 41 ಬೆಡ್, ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿ 104 ಬೆಡ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೂ ಅನುಮೋದನೆ ದೊರೆತಿದೆ. 10 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಮೇಲ್ಭಾಗದ ಎರಡನೇ ಮಹಡಿಯಲ್ಲಿ 32 ಹಾಸಿಗೆಗಳ ವಾರ್ಡ್ ವಿಭಾಗ, 7 ಹಾಸಿಗೆಗಳ ಎನ್‌ಐಸಿಯು, 2 ವಿಶೇಷ ವಾರ್ಡ್, ಗ್ರಂಥಾಲಯ, ಕಾನ್ಫರೆನ್ಸ್ ಹಾಲ್, ಬೇಬಿ ಯುನಿಟ್ ನಿರ್ಮಾಣವಾಗಲಿದೆ. ಮೂರನೇ ಮಹಡಿಯಲ್ಲಿ 32 ಹಾಸಿಗೆಗಳ ವಾರ್ಡ್, 9 ಹಾಸಿಗೆಗಳ ಎನ್‌ಐಸಿಯು, 2 ವಿಶೇಷ ವಾರ್ಡ್, ಸೆಮಿನಾರ್ ಹಾಲ್, 100 ಕೆವಿ ಸಾಮರ್ಥ್ಯದ ಡಿಜೆ ಸೆಟ್, ಎರಡು ಲಿಫ್ಟ್ ಕಾಮಗಾರಿಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸಲು ಕಾಲಾವಕಾಶ ನೀಡಲಾಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳಿಂದ ನಗರ ಕೇಂದ್ರಕ್ಕೆ ಹೆಚ್ಚು ಜನ ಹೆರಿಗೆಗೆ ಬರುತ್ತಿದ್ದಾರೆ. ಹಾಲಿ ಇರುವ ಆಸ್ಪತ್ರೆಯಲ್ಲಿ ಜಾಗ ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಕಾಮಗಾರಿಗಳು ಆರಂಭವಾಗಲಿವೆ ಎಂದರು. ಡಿಎಚ್‌ಒ ಡಾ| ರಂಗನಾಥ್ ಮಾತನಾಡಿ, ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಮಕ್ಕಳ ಐಸಿಯು ಘಟಕ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮೂರು ಆಕ್ಸಿಜನ್ ಘಟಕ ಕಾರ್ಯಾರಂಭ ಮಾಡಲಿದ್ದು, ದಾವಣಗೆರೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಅವರು ನೀಡಿರುವ ಘಟಕದ ಕಾಮಗಾರಿ ಮುಗಿದಿದೆ. ಇನ್ನೂ ಎರಡು ಘಟಕಗಳ ಕೆಲಸ ಎರಡು ತಿಂಗಳಲ್ಲಿ ಮುಗಿಯಲಿದೆ. ಹೊಸದುರ್ಗ ಹಾಗೂ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗಳ ಆವರಣದಲ್ಲಿ ಕೂಡ ಆಕ್ಸಿಜನ್ ಘಟಕಗಳ ಕೆಲಸ ನಡೆಯುತ್ತಿದೆ ಎಂದರು.
ಮಕ್ಕಳ ಚಿಕಿತ್ಸೆಗಾಗಿ 100 ಜನ ಸ್ಟಾಫ್ ನರ್ಸ್‌ಗಳಿಗೆ ತರಬೇತಿ ಕೊಡಿಸಲಾಗಿದೆ. ಜಿಲ್ಲೆಯಲ್ಲಿರುವ 27 ಕೋವಿಡ್ ಕೇರ್ ಸೆಂಟರ್‌ಗಳ ಪೈಕಿ 6 ಸೆಂಟರ್ ಗಳನ್ನು ಮಕ್ಕಳಿಗೆ ಮೀಸಲಿಟ್ಟು, 600 ಬೆಡ್ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಸೇರಿದಂತೆ ಜಿಲ್ಲಾಸ್ಪತ್ರೆಯ ವೈದ್ಯರು ಇದ್ದರು.