ಚಳ್ಳಕೆರೆ: ಕಳೆದ ಏಳು ವರ್ಷಗಳಿಂದ ರಾಷ್ಟ್ರವನ್ನಾಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಅಚ್ಚೇ ದಿನ್ ಬರಲಿದೆ ಎಂದು ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದರು. ಆದರೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸಿ ಬಡವರಿಗೆ ಸಂಕಷ್ಟ ತಂದಿಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ಬೆಲೆ ಏರಿಕೆ ವಿರೋಧಿಸಿ ಇಲ್ಲಿನ ನೆಹರೂ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2014ರಲ್ಲಿ ಅಧಿ ಕಾರಕ್ಕೆ ಬರುವ ಸಂದರ್ಭದಲ್ಲಿ ವಿದೇಶದಲ್ಲಿರುವ ಸಾವಿರಾರು ಕೋಟಿ ಕಪ್ಪುಹಣವನ್ನು ತಂದು ದೇಶದ ಕಡುಬಡವರಿಗೆ ಹಂಚುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.
ನಿರುದ್ಯೋಗ ನಿವಾರಣೆಗಾಗಿ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿಯೂ ಹೇಳಿದ್ದರು. ಆದರೆ ಯಾವುದೇ ಭರವಸೆ ಈಡೇರಿಸದ ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಸುಳ್ಳು ಭರವಸೆಗಳ ಮೂಲಕ ಮೋದಿ ಆಡಳಿತ ನಡೆಸುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಪ್ರಾಮಾಣಿಕ ಆಡಳಿತ ನೀಡುವ ಭರವಸೆಯೊಂದಿಗೆ ಹಸಿರು ಶಾಲು ಹೊದ್ದು ಅ ಧಿಕಾರಕ್ಕೆ ಬಂದರು. ಆದರೆ ಈಗ ರೈತರ ಉಸಿರನ್ನೇ ನಿಲ್ಲಿಸುವ ಯತ್ನ ಮಾಡುತ್ತಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸದೆ ರಾಜ್ಯದ ಸಾವಿರಾರು ಜನರನ್ನು ಕೊರೊನಾಕ್ಕೆ ಬಲಿ ಕೊಟ್ಟ ಅತ್ಯಂತ ಕೆಟ್ಟ ಆಡಳಿತ ನೀಡಿದ್ದಾರೆ. ಅವರ ವಿರುದ್ಧ ನಿರಂತರ ಟೀಕೆಗಳು ವ್ಯಕ್ತವಾದರೂ ಬಿಜೆಪಿ ಹೈಕಮಾಂಡ್ ಅವರಿಗೆ ರಕ್ಷಣೆ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು. ಶಾಸಕ ಟಿ. ರಘುಮೂರ್ತಿ ಮಾತನಾಡಿ, ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹಲವಾರು ರೀತಿಯ ಪ್ರತಿಭಟನೆಗಳ ಮೂಲಕ ಎಚ್ಚರಿಕೆ ನೀಡಿದರೂ ದುರಾಡಳಿತ ಮುಂದುವರೆದಿದೆ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ.
ತನಿಖೆಗೆ ಒತ್ತಾಯಿಸಿದರೂ ಸರ್ಕಾರ ನಿರ್ಲಕ್ಷ ವಹಿಸಿದೆ. ಬೆಲೆ ಏರಿಕೆ ವಿರುದ್ಧ ಪಾದಯಾತ್ರೆ, ಎತ್ತಿನಗಾಡಿ ಜಾಥಾ, ಸೈಕಲ್ ಜಾಥಾ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿ ಸಿ ಬಿಜೆಪಿಗೆ ಪಾಠ ಕಲಿಸಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ವಕ್ತಾರ ಸಲೀಂ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮೊದಲಾದವರು ಮಾತನಾಡಿದರು. ಸೈಕಲ್ ಜಾಥಾದಲ್ಲಿ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ನಗರಸಭೆ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾ ಧಿಕಾರಿಗಳು ಪಾಲ್ಗೊಂಡಿದ್ದರು.
ಜಗಜೀವನರಾಮ್ ವೃತ್ತ, ಅಂಬೇಡ್ಕರ್ ವೃತ್ತ, ಬಳ್ಳಾರಿ, ಪಾವಗಡ ರಸ್ತೆ, ಎಪಿಎಂಸಿ ಮಾರುಕಟ್ಟೆ ಮಾರ್ಗದಲ್ಲಿ ಸಂಚರಿಸಿದ ಸೈಕಲ್ ಜಾಥಾ ನೆಹರೂ ವೃತ್ತಕ್ಕೆ ಆಗಮಿಸಿತು. ಜಾಥಾದಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.