ಚಿತ್ರದುರ್ಗ: ದೇಸಿ ಗೋವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಬೇಕು ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ದೇಶಿ ತಳಿ ಗಿರ್ ಹಸುಗಳ ಸಾಕಾಣಿಕೆದಾರರ ಸಹಕಾರ ಸಂಘ ಸ್ಥಾಪಿಸಿದ್ದು, ಭವಿಷ್ಯದಲ್ಲಿ ಇದನ್ನು ದೊಡ್ಡ ಸಂಸ್ಥೆಯನ್ನಾಗಿ ಮಾಡಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ಇದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ನಗರದ ಜೆಸಿಆರ್ ಮುಖ್ಯ ರಸ್ತೆಯ ಸಾಯಿಬಾಬಾ ಮಂದಿರದ ಪಕ್ಕದಲ್ಲಿ ದೇಸಿ ತಳಿ ಹಸುಗಳ ಹಾಲು ಹಾಗೂ ಇದರ ಉತ್ಪನ್ನಗಳ ಮಾರಾಟ ಮಳಿಗೆ ದುರ್ಗಾಮೃತ ದೇಸಿ ಎ2 ಮಿಲ್ಕ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಗ ನಿರೋಧಕ ಶಕ್ತಿ ಹೊಂದಿರುವ ದೇಸಿ ತಳಿಗಳ ಗೋವಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ದೇಸಿ ಗೋವುಗಳ ಸಾಕಾಣಿಕೆದಾರರ ಸಹಕಾರ ಸಂಘ ಸ್ಥಾಪಿಸಲಾಗಿದ್ದು, ಗ್ರಾಹಕರು ನಮ್ಮ ದೇಸಿ ತಳಿಗಳ ಹಸುವಿನ ಹಾಲನ್ನು ಖರೀದಿಸುವ ಮೂಲಕ ದೇಸಿ ಹಸುಗಳ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸಿ ದೇಸಿ ಗೋವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಗ್ರಾಹಕರಿಗೆ ಲೀಟರ್‌ಗೆ 75 ರೂ.ನಂತೆ, ತಮ್ಮ ಮನೆಗೆ ಡೆಲಿವರಿ ನೀಡಲು 80 ರೂ. ನಿಗ ದಿ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ದೇಸಿ ತಳಿ ಹಸುಗಳ ಬೆಣ್ಣೆ, ತುಪ್ಪ, ಆಕರ ಸೇರಿದಂತೆ ಮತ್ತಿತರ ಉತ್ಪನ್ನಗಳ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನಿ ಎಂ. ಜಯಣ್ಣ ಮಾತನಾಡಿ, ಸುಮಾರು 85 ದೇಸಿ ತಳಿ ಗಿರ್ ಹಸುಗಳ ಸಾಕಾಣಿಕೆ ಮಾಡುತ್ತಿದ್ದೇವೆ. ಶ್ರದ್ಧೆ ಆಸಕ್ತಿಯಿಂದ ಮಾಡಿದರೆ ಯಸಸ್ಸು ಸಾ ಧಿಸಬಹುದು ಎಂದರು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ದುಶ್ಚಟಗಳಿಂದ ದೂರ ಇದ್ದು ದೇಸಿ ತಳಿ ಹಸುಗಳ ಹಾಲು ಮತ್ತಿತರ ಉತ್ಪನ್ನಗಳನ್ನು ಸೇವಿಸಬೇಕು. ಇದರಿಂದ ಸುಖ ನಿದ್ರೆ, ಉತ್ತಮ ಆರೋಗ್ಯ ಹೊಂದಲು ಸಾಧ್ಯ. 33 ಕೋಟಿ ದೇವತೆಗಳು ಗೋವಿನಲ್ಲಿವೆ. ಗೋವುಗಳನ್ನು ಸಾಕುವುದರಿಂದ ನಾನಾ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ಹೇಳಿದರು.
ರಾಜರಾಜೇಶ್ವರಿ ದೇವಸ್ಥಾನದ ನಾಗರಾಜ್ ಭಟ್ ಮಾತನಾಡಿ, ನಮ್ಮಲ್ಲಿ ವೈಯಕ್ತಿಕವಾಗಿ ದೇಸಿ ತಳಿ ಹಸುಗಳನ್ನು ಸಾಕಾಣಿಕೆ ಮಾಡುವವರು ತುಂಬಾ ಜನ ಇರಬಹುದು. ಆದರೆ ದೇಸಿ ತಳಿ ಹಸುಗಳ ಸಾಕಾಣಿದಾರರ ಸಹಕಾರ ಸಂಘ ಮಾಡಿರುವುದು ಜಿಲ್ಲೆ ಅಷ್ಟೇ ಅಲ್ಲದೇ ರಾಜ್ಯದಲ್ಲಿ ಇದೇ ಮೊದಲು ಇರಬಹುದು ಎಂದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಬಾಬುರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಡಿ.ಎಂ. ಲಿಂಗರಾಜು ಮತ್ತಿತರರು ಭಾಗವಹಿಸಿದ್ದರು.
ದೇಸಿ ತಳಿ ಹಸುಗಳ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಉಪಾಧ್ಯಕ್ಷರಾಗಿ ನಾಗರಾಜ್ ಭಟ್, ಖಜಾಂಚಿ ಮನೋಹರ್, ಕಾರ್ಯದರ್ಶಿ ಜ್ಞಾನೇಶ್ವರ್ ಸೇರಿ ಸಂಘದಲ್ಲಿ ಸುಮಾರು 15 ಮಂದಿ ಇದ್ದಾರೆ.