Advertisement

ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧ

10:37 PM Jul 06, 2021 | Team Udayavani |

ಹೊಳಲ್ಕೆರೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯಗಳಿಗೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ತಾಲೂಕಿನ ರಾಮಗಿರಿಯಲ್ಲಿ ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ರಾಮಗಿರಿ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ ಇಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಜೊತೆಗೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪನವರು ಕೋವಿಡ್‌ -19 ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.

ಮುಂಬರುವ ದಿನಗಳಲ್ಲಿ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಹೊಳಲ್ಕೆರೆ ಭಾಗದಲ್ಲಿ ಸುಮಾರು 90 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು. ಗಂಗಾಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ ಕೊರೆಸಲು ಫಲಾನುಭವಿ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು.

ಈ ಹಿಂದೆ ಗಂಗಾಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ ಕೊರೆಸಲು ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಿ ಏಜೆನ್ಸಿಗಳಿಂದ ಕೊಳವೆಬಾವಿ ಕೊರೆಯಿಸಲಾಗುತ್ತಿತ್ತು. ಆದರೆ ಇನ್ನೂ ಮುಂದೆ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇನ್ನೂ 15 ದಿನಗಳೊಳಗೆ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆಯಾಗಲಿದ್ದು, ಫಲಾನುಭವಿಗಳು ಕೊಳವೆಬಾವಿ ಕೊರೆಸಿಕೊಳ್ಳಬಹುದು ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಕಳೆದ ಬಾರಿ ಶಾಸಕನಾದ ಸಂದರ್ಭದಲ್ಲಿ ತುಪ್ಪದಹಳ್ಳಿ, ಶಿವಗಂಗ, ಮಲ್ಲಾಡಿಹಳ್ಳಿ, ಗೌಡಿಹಳ್ಳಿ, ಎನ್‌.ಜಿ.ಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟಿಸಲಾಗಿದೆ.

Advertisement

ರಾಮಗಿರಿ ಗ್ರಾಮದ ಸರ್ಕಲ್‌ ಅನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಯಾವುದೇ ಸಿಟಿಗಿಂತ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಲಾಗಿದೆ ಎಂದರು. ಕ್ಷೇತ್ರದ 300 ಹಳ್ಳಿಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದಕ್ಕಾಗಿ 276 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗಿದೆ. ವಾಣಿವಿಲಾಸ ಜಲಾಶಯದಿಂದ ನೀರು ತರುವ ಕೆಲಸ ಇನ್ನೂ ಒಂದು ತಿಂಗಳಲ್ಲಿ ಪ್ರಾರಂಭವಾಗಲಿದೆ.

ಎರಡು ವರ್ಷದೊಳಗೆ ಎಲ್ಲರ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಇದರ ಜೊತೆಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್‌ ಹಾಕುವ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಡಿಎಚ್‌ಒ ಡಾ| ರಂಗನಾಥ್‌, ತಾಲೂಕು ಆರೋಗ್ಯಾಧಿಕಾರಿ ಡಾ.| ಜಯಸಿಂಹ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್‌, ಪುರಸಭೆ ಅಧ್ಯಕ್ಷ ಅಶೋಕ್‌, ಉಪಾಧ್ಯಕ್ಷ ರಮೇಶ್‌, ಸದಸ್ಯ ಮುರುಗೇಶ್‌, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next