ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕಾಲಹರಣ ಮಾಡುವ ಮೂಲಕ ನಿರ್ಲಕ್ಷé ಮಾಡುತ್ತಿದ್ದಾರೆ. ರೈತರ ಭೂಸ್ವಾದೀನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೋರಾಟಗಾರ ಕಸುವನಹಳ್ಳಿ ರಮೇಶ್ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ವಿವಿ ಸಾಗರ ಮತ್ತು ಭದ್ರಾ ಮೇಲ್ದಂಡೆ ಅಚ್ಚುಕಟ್ಟದಾರರ ಹಿತರಕ್ಷಣಾ ಸಭೆಯಲ್ಲಿ ಮಾತನಾಡಿದ ಅವರು, ಎತ್ತಿನ ಹೊಳೆಯಿಂದ ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ನೀರು ಹರಿಸಲು ಇರುವಂತಹ ಅಡಿ ತಡೆಯನ್ನು ಸರ್ಕಾರದ ಹಂತದಲ್ಲಿ ಚರ್ಚಿಸಬೇಕು. ವಿವಿ ಸಾಗರದ ನೀರಿನ ಸಂಗ್ರಹದ ಸಾಮರ್ಥ್ಯ ಹೆಚ್ಚಿಸಲು ಯೋಜನೆ ರೂಪಿಸಬೇಕು ಎಂದರು.
ಎಚ್.ಆರ್. ತಿಮ್ಮಯ್ಯ ಮಾತನಾಡಿ, ವಿವಿ ಸಾಗರದ ನೀರು ಜಿಲ್ಲೆಯ ಚಳ್ಳಕೆರೆ ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕುಗಳಿಗೆ ಮತ್ತು ತಾಲೂಕಿನ 130 ಹಳ್ಳಿಗಳಿಗೆ ಹೋಗುವುದರಿಂದ ಹೆಚ್ಚುವರಿ 2 ಟಿಎಂಸಿ ಅಡಿ ನೀರು ವಿವಿಸಾಗರಕ್ಕೆ ಬೇಕಾಗುತ್ತದೆ. ಈ ಕುರಿತು ನೀರಾವರಿ ಸಚಿವರ ಗಮನ ಸೆಳೆದು ಹೆಚ್ಚುವರಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಕಾನೂನಾತ್ಮಕ ಹೋರಾಟ ಮಾಡಬೇಕು ಎಂದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರೈತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ನೀರಿನ ಸಮಸ್ಯೆ ಇರುವ ಹೋಬಳಿಗಳಲ್ಲಿ ಈಗಾಗಲೇ ನೀರು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾದ ಧರ್ಮಪುರ ಕೆರೆ ತುಂಬಿಸಲು ಈಗಾಗಲೇ ಆಡಳಿತಾತ್ಮಕವಾಗಿ ಕ್ರಮ ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕೆಲಸ ಆರಂಭವಾಗಲಿದೆ.
ಐಮಂಗಲಿ ಹೋಬಳಿಗೆ ನೀರು ನೀಡುವ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಯಾವುದೇ ಕಾರಣಕ್ಕೂ ಭದ್ರಾ, ತುಂಗಾದಿಂದ ವಿವಿ ಸಾಗರಕ್ಕೆ ಹರಿಸುತ್ತಿರುವ ನೀರಿನ ಪ್ರಮಾಣ ಜಾಸ್ತಿ ಮಾಡಲು ಆಗುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡಿದರೆ ಅದಕ್ಕೆ ನನ್ನ ಬೆಂಬಲ ಇದೆ. ಜೆ.ಜೆ ಹಳ್ಳಿ ಭಾಗದ ರೈತರು ವಿವಿ ಸಾಗರದ ನೀರು ನೀಡಬೇಕು ಎಂದು ಗಾಯತ್ರಿ ಜಲಾಶಯಕ್ಕೆ ನೀರು ಹರಿಸಬೇಕು ಎಂಬುದು ಬೇಡಿಕೆ ಆಗಿದೆ. ಈ ಬಗ್ಗೆ ನಾನು ಮತ್ತು ಸಂಸದರು, ಮುಖ್ಯಮಂತ್ರಿಗಳ ಬಳಿ ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸುವುದಾಗಿ ಹೇಳಿದರು. ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳು, ಸಂಸದರು ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದಾರೆ.
ಶೀಘ್ರದಲ್ಲಿ ರಾಷ್ಟ್ರೀಯ ಯೋಜನೆಯಾಗಲಿದೆ ಎಂದರು. ಸಭೆಯಲ್ಲಿ ಬಬ್ಬೂರು ಸುರೇಶ್, ನಾರಾಯಣ ಚಾರ್ ಆರ್.ಕೆ. ಗೌಡ, ಗಿರಿಸ್ವಾಮಿ, ಪಾಪಣ್ಣ, ಮಂಜುನಾಥ್, ಆನಂದಶೆಟ್ಟಿ, ರಾಜೇಂದ್ರನ್, ಷಉಲ್ಲಾ, ಶ್ರೀನಿವಾಸ್ ಉಪಸ್ಥಿತರಿದ್ದರು.