ಚಿತ್ರದುರ್ಗ: ದೇಶವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ರಾಹುಲ್ ಗಾಂ ಧಿ ಅವರಿಗಿದೆ. ಆದರೆ ಬಿಜೆಪಿ ಅವರ ವಿರುದ್ಧ ನಿರಂತರವಾಗಿ ಷಡ್ಯಂತ್ರ ರೂಪಿಸುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಆರೋಪಿಸಿದರು.
ಚನ್ನಯ್ಯನಹಟ್ಟಿ ದಲಿತ ಕಾಲೋನಿಯಲ್ಲಿ ಕೊರೊನಾ ಜಾಗೃತಿ ಹಾಗೂ ರಾಹುಲ್ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸ್ಥಳೀಯರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು. ಚೀನಾದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡು ವಿವಿಧ ದೇಶಗಳಿಗೆ ವ್ಯಾಪಿಸುತ್ತಿದ್ದಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.
ಆದರೆ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಸಲಹೆಯನ್ನು ಉದಾಸೀನ ಮಾಡಿ ದೇಶದೊಳಗೆ ಕೊರೊನಾ ಸೋಂಕು ಪ್ರವೇಶಿಸಲು ಕಾರಣರಾದರು ಎಂದು ದೂರಿದರು. ಇಂದಿ ರಾ ಗಾಂಧಿ ಅವರಂತೆಯೇ ರಾಹುಲ್ ಗಾಂ ಧಿ ಜನಸಾಮಾನ್ಯರೊಂದಿಗೆ ಬೆರೆಯುವ ರೀತಿ, ಮಾಧ್ಯಮಗಳಿಗೆ ಮುಖಾಮುಖೀ ಆಗುವ ಸ್ವಭಾವ, ಸರಳತೆ ಕಂಡು ಬಿಜೆಪಿಯವರು ರಾಹುಲ್ ಗಾಂಧಿ ಅವರ ಕೈಗೆ ಅಧಿ ಕಾರ ಸಿಕ್ಕಿದರೆ ಮತ್ತೆ ಮರಳಿ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಅವರನ್ನು ದುರ್ಬಲಗೊಳಿಸಲು ನಿರಂತರವಾಗಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋನಿಯಾ ಗಾಂ ಧಿ, ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸದೇ ತಾವೇ ಸ್ವತಃ ಪ್ರಧಾನಿ ಆಗಬಹುದಿತ್ತು. ಆದರೆ ಮುತ್ಸದ್ಧಿ, ಆರ್ಥಿಕ ತಜ್ಞನಿಗೆ ಪ್ರಧಾನಿ ಸ್ಥಾನ ನೀಡುವ ಮೂಲಕ ತ್ಯಾಗ ಮಾಡಿದ್ದಾರೆ. ಈ ರೀತಿ ಅಧಿಕಾರ ತ್ಯಾಗ ಮಾಡಿದ್ದು, ಈ ಶತಮಾನದಲ್ಲಿ ವಿಶ್ವದ ಯಾವ ದೇಶದಲ್ಲೂ ಇಲ್ಲ. ಬಿಜೆಪಿ ಏನೇ ಷಡ್ಯಂತ್ರ ನಡೆಸಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ರಾಹುಲ್ ಗಾಂಧಿ ಪ್ರಧಾನಿಯಾಗುವುದು ನಿಶ್ಚಿತ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ರಾಹುಲ್ ಗಾಂ ಧಿ ಅಧಿ ಕಾರಕ್ಕಾಗಿ ಎಂದೂ ಹಪಹಪಿಸಿಲ್ಲ. ದೇಶ ಬಲಿಷ್ಠವಾಗಬೇಕು. ರೈತರು, ಕಾರ್ಮಿಕರು, ಅಶಕ್ತ ಜನರು ಶಕ್ತರಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ. ಇಂತಹ ನಾಯಕ ಪ್ರಧಾನಿ ಆದರೆ ಎಲ್ಲ ವರ್ಗದ ಜನ ನೆಮ್ಮದಿ ಜೀವನ ನಡೆಸಲು ಸಹಕಾರ ಆಗಲಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ತಿಪ್ಪೇಶ್, ರಂಗನಾಯಕ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಕಾಂಗ್ರೆಸ್ ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್. ಮೈಲಾರಪ್ಪ, ಪ್ರಸನ್ನ ಜಯಣ್ಣ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ತಿಮ್ಮಣ್ಣ, ತಿಪ್ಪೇಸ್ವಾಮಿ, ರಾಜಣ್ಣ ಮತ್ತಿತರರು ಇದ್ದರು.