ಚಿತ್ರದುರ್ಗ: ಅಪರೂಪದ ನಟ ಸಂಚಾರಿ ವಿಜಯ್ ಬದುಕು ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ನಗರದ ಹೊರವಲಯ ಸೀಬಾರದಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಚಾರಿ ವಿಜಯ್‌ಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
“ನಾನು ಅವನಲ್ಲ ಅವಳು’ ಚಿತ್ರದಲ್ಲಿ ನೈಜ ನಟನೆ ಮೂಲಕ ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ತಂದುಕೊಟ್ಟ ವಿಜಯ್ ಅವರ ಸೇವಾ ಕಾರ್ಯಗಳು, ನೋಂದವರಿಗೆ ಮಿಡಿಯುತ್ತಿದ್ದ ಹೃದಯವಂತಿಕೆ, ಅಹಂಕಾರ ರಹಿತ ಜೀವನ ನಿಜಕ್ಕೂ ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದರು. ನಟನೆಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಿಕ್ಕಾಗ ವಿಜಯ್‌ಗೆ ಹೆಚ್ಚು ಗೌರವ ಲಭಿಸಬೇಕಾಗಿತ್ತು. ಆದರೆ ವಿವಿಧ ಕಾರಣಕ್ಕೆ ದೊರೆಯದಿದ್ದಾಗ ನಾನು ಆ ಯುವಕನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿದ್ದೆ.
ಸಿಎಂ ಅವರಿಂದ ಗೌರವ ಸಮರ್ಪಣೆ ಕಾರ್ಯ ಮಾಡಿದ್ದು ನನಗೆ ವೈಯಕ್ತಿಕವಾಗಿ ಹೆಚ್ಚು ನೆಮ್ಮದಿ ತಂದಿದೆ. ಹೆಲ್ಮೆಟ್ ಧರಿಸಿದ್ದರೆ ಅಪರೂಪದ ನಟ ವಿಜಯ್ ಜೀವ ಉಳಿಯುತ್ತಿತ್ತು ಎಂಬುದು ಅಪಘಾತವನ್ನು ಪರಿಶೀಲಿಸಿದ ಪೋಲೀಸರು, ವೈದ್ಯರ ಮಾತು ಎಂದು ತಿಳಿಸಿದರು.
ಸಂಚಾರಿ ವಿಜಯ್ ಅವರ ಸೇವಾ ಕಾರ್ಯ, ವೃತ್ತಿಯಲ್ಲಿನ ಬದ್ಧತೆ, ಬಡತನದಲ್ಲಿ ಜನಿಸಿದರೂ ಸಾಧನೆ ಮಾಡಬಹುದು ಎಂಬ ಛಲಗಾರಿಕೆ ಜೊತೆಗೆ ಅಕಾಲಿಕ ಸಾವಿನಿಂದ ಹೆಲ್ಮೆಟ್ ಧರಿಸುವ ಎಚ್ಚರಿಕೆ ಪಾಠವನ್ನೂ ಕಲಿಯಬೇಕು. ಹೆಲ್ಮೆಟ್ ಧರಿಸುವುದು ಕಾನೂನು, ಪೋಲಿಸರ ಭಯಕ್ಕೆ ಅಲ್ಲ ಎಂಬ ಅರಿವು ಯುವಜನರಲ್ಲಿ ಮೂಡಬೇಕು ಎಂದರು.
ತಾಯಿ ಮಾದಿಗ ಸಮುದಾಯ, ತಂದೆ ವೀರಶೈವ ಲಿಂಗಾಯತ ಸಮುದಾಯದವರಾಗಿದ್ದ ಕಾರಣಕ್ಕೆ ವಿಜಯ್ ಅವರಲ್ಲಿ ಜಾತ್ಯತೀತ ನಡೆ ಬೇರೂರಿತ್ತು. ಜಾತಿ-ಧರ್ಮ ರಹಿತ ಕಾರ್ಯಗಳು ಹಿರಿಯರ ಮೆಚ್ಚುಗೆಗೆ ಪಾತ್ರವಾಗಿದ್ದವು. ಅಂದಿನ ಜಾತಿ ವ್ಯವಸ್ಥೆಯ ಕಾಲದಲ್ಲಿ ತಮ್ಮ ತಂದೆ-ತಾಯಿ ಅಂತರ್ಜಾತಿ ವಿವಾಹ ಕುರಿತು ಅನೇಕ ಬಾರಿ ಆಪ್ತರೊಂದಿಗೆ ಚರ್ಚಿಸುತ್ತಿದ್ದುದನ್ನು ವಿಜಯ್ ಗಮನಿಸಿದ್ದರು.
ಮಾದಿಗ ಸಮುದಾಯದ ಮಹಿಳೆಯನ್ನು ವರಿಸಿದ ಅಪ್ಪನ ಜಾತ್ಯತೀತ ಮನೋಭಾವ ಹಾಗೂ ಅಸ್ಪಶ್ಯತೆ ನೋವನ್ನು ಉಂಡ ಅಮ್ಮನ ಕುರಿತು ಹೆಚ್ಚು ಗೌರವ ಹೊಂದಿದ್ದ ವಿಜಯ್, ಈ ಕಾರಣಕ್ಕೆ ಜಾತಿ-ಧರ್ಮದ ಬೇಲಿ ದಾಟಿ ಬೆಳೆಯಬೇಕು, ಜನರಿಗೆ ಸೇವೆ ಮಾಡಬೇಕೆಂಬ ಮಹಾ ಕನಸು ಕಟ್ಟಿಕೊಂಡಿದ್ದರು ಎಂದು ಸ್ಮರಿಸಿದರು. ಈ ವೇಳೆ ಲಿಡ್ಕರ್ ಮಾಜಿ ಅಧ್ಯಕ್ಷ ಓ. ಶಂಕರ್, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಕಾಂಗ್ರೆಸ್ ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ ಇತರರು ಉಪಸ್ಥಿತರಿದ್ದರು.