ಮುಂಬಯಿ: ಕೋಟಕ್ ಲೈಫ್ ಸಂಸ್ಥೆಯ ಆಡಳಿತ ವರ್ಗದ ವತಿಯಿಂದ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಗೌರವಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರಿಗೆ ಸಮ್ಮಾನ ಕಾರ್ಯಕ್ರಮವು ಇತ್ತೀಚೆಗೆ ಕಲ್ಯಾಣ್‌ನಲ್ಲಿ ಸರಳ ರೀತಿಯಲ್ಲಿ ನಡೆಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಚಿತ್ರಾ ಆರ್. ಶೆಟ್ಟಿ,ಕೋವಿಡ್ ಸಂದಿಗ್ಧ ಸಮಯ ನಮ್ಮ ಜೀವಮಾನದಲ್ಲಿ ಮರೆಯಲಾಗದ ನೆನಪುಗಳು. ಆ ಮಹಾಮಾರಿಯಿಂದ ಸಂಕಷ್ಟ ಅನುಭವಿಸಿದ ಕಲ್ಯಾಣ್ ಪರಿಸರದ ಹಳ್ಳಿಗಳು ಹಾಗೂ ದೂರದ ಆದಿವಾಸಿ ಜನರು ವಾಸಿಸುವ ಪ್ರದೇಶಗಳಲ್ಲಿರುವ ಹಲವಾರು ಕುಟುಂಬಗಳಿಗೆ ದಿನನಿತ್ಯದ ಆಹಾರ ಸಾಮಗ್ರಿ, ರೈಲ್ವೆ ಸ್ಟೇಷನ್‌ನಲ್ಲಿದ್ದ ಕಾರ್ಮಿಕರಿಗೆ ಊಟದ ವ್ಯವಸ್ಥೆ, ರಸ್ತೆ ಬಳಿಯ ಜೋಪಡಿ ನಿವಾಸಿಗಳಿಗೆ ಆಹಾರ ಪೂರೈಕೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ನೆರವು, ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರಗಳ ಕಿಟ್‌ಗಳನ್ನು ವಿತರಿಸಲಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗಿದ್ದ ಮಕ್ಕಳಿಗೆ ಉಚಿತ ಆನ್‌ಲೈನ್ ಭಜನ ತರಗತಿಗಳನ್ನು ಪ್ರಾರಂಭಿಸಿ ಮಕ್ಕಳ ಪಾಲಕರ ಪ್ರಶಂಸೆಗೆ ಪಾತ್ರವಾಗಿದ್ದೇವೆ. ನಾವು ಒಂದಾಗಿ ಮಾಡುವ ಮಹತ್ಕಾರ್ಯಗಳಿಗೆ ಸದಸ್ಯೆಯರ ಸಹಕಾರ, ಪ್ರೀತಿ, ದಾನಿಗಳ ಬೆಂಬಲವೇ ಮುಖ್ಯವಾಗಿದೆ. ಆದ್ದರಿಂದ ನಾನು ಸ್ವೀಕರಿಸುವ ಈ ಗೌರವ ಅವರೆಲ್ಲರಿಗೂ ಸಲ್ಲುತ್ತದೆ. ಓಂ ಶಕ್ತಿ ಮಹಿಳಾ ಸಂಸ್ಥೆಯಿಂದ ಇನ್ನಷ್ಟು ಸಮಾಜಪರ ಕಾರ್ಯಕ್ರಮಗಳು ಸದಾ ನಡೆಯಲಿವೆ ಎಂದರು.
ಇದನ್ನೂ ಓದಿ:ಕಡಲೆಗೆ ಕುಂಕುಮ ರೋಗ
ಕೋಟಕ್ ಲೈಫ್‌ನ ಕಲ್ಯಾಣ್ ಶಾಖೆಯ ಪ್ರಬಂಧಕ ಭವಿನ್ ಗಾಲ, ಥಾಣೆ-ಕಲ್ಯಾಣ್ ಶಾಖೆಯ ಪ್ರಾದೇಶಿಕ ಪ್ರಬಂಧಕಿ ರೋಹಿಣಿ ಪೂಜಾರಿ, ಆಶಾವರಿ ಎಸ್. ಹೆಗ್ಡೆ, ತೇಜಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.