Advertisement

ಅಸಂಘಟಿತ ಕಾರ್ಮಿಕರ ಬಾಳು ದುರ್ಬರ

04:04 PM May 05, 2019 | Naveen |

ಚಿತ್ತಾಪುರ: ಕಾರ್ಮಿಕ ವಿರೋಧಿ ನೀತಿಯಿಂದ ಅಸಂಘಟಿತ ಕಾರ್ಮಿಕರ ಬಾಳು ದುರ್ಬರವಾಗುತ್ತಿದೆ ಎಂದು ಸಿಐಟಿಯು ನಾಯಕಿ ದೇವಮ್ಮ ಅನ್ನದಾನಿ ಹೇಳಿದರು.

Advertisement

ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಸೇಂಟರ್‌ ಆಫ್‌ ಇಂಡಿಯನ್‌ ಟ್ರೇಟ್ ಯೂನಿಯನ್‌(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕ ವರ್ಗದ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾಯಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರಿಂದಾಗಿ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲಿಕಿದೆ ಎಂದು ಹೇಳಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪನ್ನು ಜಾರಿ ಮಾಡುವ ಜೊತೆಗೆ, ಗುತ್ತಿಗೆ ಮುಂತಾದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದರು.

ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು 8ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿರಾಮಕ್ಕಾಗಿ ಕೈಗೊಂಡ ಸುದೀರ್ಘ‌ವಾದ ಹೋರಾಟದ ಅಂತಿಮ ಜಯವೇ ಮೇ ದಿನವಾಗಿದೆ ಎಂದು ಹೇಳಿದರು.

ಮೇ ದಿನಾಚರಣೆ ಜಗತ್ತಿನ ಎಲ್ಲ ದೇಶಗಳ ದುಡಿಯುವ ಜನ ಆಚರಿಸುವ ಹೆಮ್ಮೆಯ ದಿನವಾಗಿದೆ. ಮೇ ದಿನವನ್ನು ದೇಶ, ಭಾಷೆ, ಧರ್ಮಗಳ ಗಡಿಗಳ ಅಡಚಣೆ ಇಲ್ಲದೆ ಆಚರಿಸಲಾಗುತ್ತದೆ. ತಮ್ಮ ಹಕ್ಕುಗಳಿಗಾಗಿ ಎಲ್ಲ ಕಾರ್ಮಿಕರು ಒಗ್ಗೂಡಿ ಹೋರಾಟ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

Advertisement

ಸಿಐಟಿಯು ತಾಲೂಕು ಅಧ್ಯಕ್ಷೆ ಶೇಖಮ್ಮ ಕುರಿ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಬಸಲಿಂಗಪ್ಪ ಡಿಗ್ಗಿ, ಕಸಾಪ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮುಖ್ಯ ಅತಿಥಿಗಳಾಗಿದ್ದರು.

ಸಿಐಟಿಯು ಮುಖಂಡರಾದ ಚಿತ್ರಶೇಖರ ದೇವರಮನಿ, ಸಂಗೀತಾ ಗುತ್ತೇದಾರ, ರೇಣುಕಾ ಕುಲಕರ್ಣಿ, ಶಾಂತಾ ಹರೇಮಠ, ಸಾಬಮ್ಮ ಕಾಳಗಿ, ಶಾಂತಾ ಗಾಯಕವಾಡ, ಶಿವುಕುಮಾರ ಜೀವಣಗಿ, ಮರೇಪ್ಪ ಕದ್ದರಗಿ, ಶಿವಪ್ಪ ಜೀವಣಗಿ, ಮಲ್ಲಿಕಾರ್ಜುನ ತೆಂಗಳಿ, ಜಯಪಾಲಸಿಂಗ್‌ ಠಾಕೂರ್‌ ಇದ್ದರು.

ಕಲ್ಯಾಣಿ ಏರಿ ಭಾಗೋಡಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next