Advertisement

ಚಿರಾಗ್‌ ಶೆಟ್ಟಿ-ರಾಂಕಿರೆಡ್ಡಿ ಮರಳಿ ಕಣಕ್ಕೆ

12:21 AM Sep 16, 2019 | sudhir |

ಹೊಸದಿಲ್ಲಿ: ಥಾಯ್ಲೆಂಡ್‌ನ‌ಲ್ಲಿ ಬಿಡಬ್ಲ್ಯುಎಫ್ ಸೂಪರ್‌ 500 ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಯ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮರಳಿ ಕಣಕ್ಕೆ ಇಳಿಯಲಿದ್ದಾರೆ. ಈ ಸಾಧನೆಯ ಬಳಿಕ ಇಬ್ಬರೂ ಗಾಯಾಳಾಗಿ ವಿಶ್ರಾಂತಿ ಯಲ್ಲಿದ್ದರು. ಇದೀಗ ಮಂಗಳವಾರದಿಂದ ಆರಂಭವಾಗಲಿರುವ 1,000,000 ಡಾಲರ್‌ ಬಹುಮಾನದ “ಚೀನ ಓಪನ್‌ ಬ್ಯಾಡ್ಮಿಂಟನ್‌’ ಕೂಟದಲ್ಲಿ ತಮ್ಮ ಸಾಮರ್ಥ್ಯ ವನ್ನು ಪಣಕ್ಕೊಡ್ಡಲಿದ್ದಾರೆ.

Advertisement

ಥಾಯ್ಲೆಂಡ್‌ ಓಪನ್‌ ಯಶಸ್ಸಿನ ಬಳಿಕ ಸ್ವಿಜರ್‌ಲ್ಯಾಂಡ್‌ನ‌ಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಿಂದ ಇಬ್ಬರೂ ಹೊರಗುಳಿದಿದ್ದರು. ಈಗ ಚೀನ ಓಪನ್‌ನಲ್ಲಿ ಆಡುವ ಮೂಲಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿ, ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಗಳಿಸುವ ಯೋಜನೆಯಲ್ಲಿದ್ದಾರೆ.

ಯಾವುದೇ ಒತ್ತಡವಿಲ್ಲ
“ನಾವಿಬ್ಬರೂ ಈಗ ಸಂಪೂರ್ಣ ಚೇತರಿಸಿ ಕೊಂಡಿದ್ದೇವೆ. ಯಾವುದೇ ಒತ್ತಡವಿಲ್ಲ. ಚೀನ ಹಾಗೂ ಅನಂತರದ ಕೊರಿಯಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿ. ಕಳೆದ ವರ್ಷ ಚೀನದಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದೆವು. ಈ ಬಾರಿ ಸುಧಾರಿತ ಪ್ರದರ್ಶನ ನೀಡಬೇಕಿದೆ. ಇದು ಸೂಪರ್‌ 1000 ಸರಣಿಯಾದ್ದರಿಂದ ಇಲ್ಲಿನ ಅಂಕಗಳು ನಮ್ಮ ರ್‍ಯಾಂಕಿಂಗ್‌ ಪ್ರಗತಿಗೆ ನೆರವಾಗಲಿವೆ’ ಎಂದು ಚಿರಾಗ್‌ ಶೆಟ್ಟಿ ಹೇಳಿದ್ದಾರೆ.

“ಸ್ಥಿರವಾದ ಪ್ರದರ್ಶನ ನೀಡುವುದು ಈಗಿನ ಅಗತ್ಯ. ಈ ವರ್ಷವನ್ನು ಟಾಪ್‌-10 ಯಾದಿ ಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಗಿಸ ಬೇಕಿದೆ. ಮುಂದಿನ ಜನವರಿ-ಎಪ್ರಿಲ್‌ ಅವಧಿ ಯಲ್ಲಿ ಒಂದೆರಡು ಕ್ವಾರ್ಟರ್‌ ಫೈನಲ್‌ ಅಥವಾ ಸೆಮಿಫೈನಲ್‌ ಪ್ರದರ್ಶನ ನೀಡಿದರೆ ಟಾಪ್‌-5 ಸ್ಥಾನಕ್ಕೆ ಏರಬಲ್ಲೆವು. ಈ ಮೂಲಕ ಟೋಕಿಯೊ ಒಲಿಂಪಿಕ್‌ ಅರ್ಹತೆ ಸಂಪಾದಿಸ ಬಹುದಾಗಿದೆ’ ಎಂಬುದಾಗಿ ಚಿರಾಗ್‌ ಹೇಳಿದರು.

ಕೆನಡಾದ ಎದುರಾಳಿ
ಚೀನ ಓಪನ್‌ಗಾಗಿ ಉತ್ತಮ ಸಿದ್ಧತೆ ಮಾಡಿ ಕೊಂಡಿರುವುದಾಗಿ ಹೇಳಿರುವ ಚಿರಾಗ್‌-ರಾಂಕಿರೆಡ್ಡಿ, ಮೊದಲ ಸುತ್ತಿನಲ್ಲಿ ಕೆನಡಾದ ಜಾಸನ್‌ ಆ್ಯಂಟನಿ ಹೊ ಶು-ನಿಲ್‌ ಯಕುರ ಜೋಡಿಯನ್ನು ಎದುರಿಸಲಿದ್ದಾರೆ. ಚಿರಾಗ್‌-ಸಾತ್ವಿಕ್‌ ಜೋಡಿ ಇವರನ್ನು ಎದುರಿಸುತ್ತಿರುವುದು ಇದೇ ಮೊದಲು. ಆದರೆ ಪ್ರಣವ್‌ ಜೆರ್ರಿ ಚೋಪ್ರಾ ಅವರೊಂದಿಗೆ ಚಿರಾಗ್‌ ಶೆಟ್ಟಿ ಈ ಜೋಡಿಯನ್ನು ಸ್ವಿಸ್‌ ಓಪನ್‌ನಲ್ಲಿ ಎದುರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next