Advertisement
ಇನ್ನು ಎಲ್ಲಾ ವಿಷಯದಲ್ಲೂ ಒಳ್ಳೆಯದರೊಂದಿಗೆ ಕೆಟ್ಟದ್ದೂ ಇರುವ ಹಾಗೆ ಕೆಲವೊಮ್ಮೆ ಈ ಚಿಂಟುವೂ ನಮಗೆ ಕೋಪ ತರಿಸುತ್ತಿತ್ತು. ನಾವು ಸಸ್ಯಾಹಾರಿಯಾದ ಕಾರಣ, ಒಮ್ಮೊಮ್ಮೆ ಅದು ಕಪ್ಪೆ , ಸುಣ್ಣ ಮೀನನೆಲ್ಲಾ ಕಚ್ಚಿ ತರುವಾಗ ಅದನ್ನ ಹೊರಗೆ ಹಾಕುವ ಕೆಲಸವೇ ಸಾಕೆನಿಸುತ್ತಿತ್ತು. ಇನ್ನು ಒಂದ್ಸಲ ಅಪರೂಪಕ್ಕೆ ಮನೆಬಾಗಿಲಿಗೆ ಬರುವ ಕಾಕರಾಜ, ತನ್ನ ಹಿಂಡಿನೊಂದಿಗೆ ಒಮ್ಮೆ ಮನೆಯ ಹತ್ತಿರ ಬಂದು ಒಂದೇ ಸಮನೆ ಕೂಗುತ್ತಿತ್ತು. ಏನಾಯಿತೆಂದು ಹಿತ್ತಲ ಬಳಿ ಹೋಗಿ ನೋಡಿದಾಗ ಇದು ನಮ್ಮ ಚಿಂಟೂವಿನ ಕಿತಾಪತಿಯೆಂದು ತಿಳಿಯಿತು. ಪಾಪ, ಯಾವುದೋ ಒಂದು ಕಾಗೆಯನ್ನು ಕಚ್ಚಿ ನಮ್ಮ ಮನೆಯ ಹಿಂದುಗಡೆ ತಂದ ಪರಿಣಾಮವೇ ಇದು ಎಂದು ಸ್ಪಷ್ಟವಾಗಿ, ಅದನ್ನ ಓಡಿಸಲಿಕ್ಕೆ ಹರಸಾಹಸವೇ ಪಡಬೇಕಾಯಿತು.
ಇದಾದ ಬಳಿಕ ನಮ್ಮ ಮನೆಯಲ್ಲಿ ಬೆಕ್ಕಿನ ಪ್ರವೇಶ ಇರಲಿಲ್ಲ. ಆದರೆ ಇತ್ತೀಚೆಗೆ ನನ್ನ ತಮ್ಮ ಹಠ ಮಾಡಿದ್ದಕ್ಕೆ ಅಪ್ಪ ಒಂದು ಬೆಕ್ಕಿನ ಮರಿಯನ್ನು ತಂದೇ ಬಿಟ್ಟರು. ಇದಕ್ಕೆ “ಬಿಲ್ಲಿ’ ಅಂತ ಹೆಸರಿಟ್ಟೆವು. ಚಿಂಟುಗೆ ಹೋಲಿಸಿದರೆ ಇದು ಬೇರೆ ಲಿಂಗವಾದರೂ ಅಂದರೆ ಹೆಣ್ಣುಮರಿಯಾದರೂ, ಬಣ್ಣ ಅದರದ್ದೇ ಆದ್ದರಿಂದ ನನಗಂತೂ ತುಂಬಾನೇ ಖುಷಿಯಾಯಿತು. ಇದು ಕೂಡ ಸಣ್ಣ ಮರಿಯಾದ್ದರಿಂದ ಚಿಂಟೂವಿನ ತರಹ ಚೇಷ್ಟೆಯನ್ನು ಮಾಡಿ ನಮಗೆ ಖುಷಿ ತರಿಸುತ್ತೆ. ಒಟ್ಟಾರೆಯಾಗಿ ನನ್ನ ತಮ್ಮನಿಂದ ಪುನಃ ನಮ್ಮ ಮನೆಗೆ ಬೆಕ್ಕಿನ ಪ್ರವೇಶ ಆಯಿತು. ನಾಗರತ್ನ ಶೆಣೈ ಎಕ್ಸಲೆಂಟ್ ಪಿಯು ಕಾಲೇಜು, ಸುಣ್ಣಾರಿ