Advertisement

ರೈತರಿಗೆ ಸಮಸ್ಯೆ ಕೇಳುವವರೇ ಇಲ್ಲ

01:17 PM Mar 21, 2023 | Team Udayavani |

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿಗೆ ತಹಶೀಲ್ದಾರ್‌ ಗ್ರೇಡ್‌-1 ಇಲ್ಲ, ತಾಲೂಕು ಆಡಳಿತ ಕಚೇರಿಯಲ್ಲಿ ಗುಮಾಸ್ಥರುಗಳಿಲ್ಲ, ಕಸಬಾ ಹೋಬಳಿ ಸೇರಿದಂತೆ ಕೆಲವು ಹೋಬಳಿಗಳಿಗೆ ರಾಜಸ್ವ ನಿರೀಕ್ಷಕರಿಲ್ಲ, ಗ್ರಾಮ ಲೆಕ್ಕಾಧಿಕಾರಿಗಳೇ ರಾಜಸ್ವ ನಿರೀಕ್ಷಕರು, ರಾಜಸ್ವ ನಿರೀಕ್ಷಕರೇ ಗ್ರಾಮ ಲೆಕ್ಕಾಧಿಕಾರಿಗಳು. ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಗಳೇ ಗುಮಾಸ್ಥರಾಗಿ ಕೆಲಸ ಮಾಡುತ್ತಿದ್ದಾರೆ ಕಚೇರಿಯಲ್ಲಿ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ, ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.

Advertisement

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಸರ್ಕಾರ 2002-03ನೇ ಸಾಲಿನಲ್ಲಿ ಕೈ ಬರಹದ ಪಹಣಿಯನ್ನು ಗಣಕೀಕರಣ ಮಾಡಲಾಯಿತಾದರೂ ಪಹಣಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ಕೆಲಸ ಇದುವರಿವಿಗೂ ಮುಗಿದಿಲ್ಲ. ಅಲ್ಲದೆ ಪಹಣಿಯಲ್ಲಿನ 3 ಮತ್ತು 9ನೇ ಕಾಲಂಗಳಲ್ಲಿ ಹೊಂದಾಣಿಕೆಯನ್ನು ಸಂಪೂರ್ಣಗೊಳಿಸುವ ಕೆಲಸ ಇದುವರಿವಿಗೂ ಆಗಿಲ್ಲ. ಅನಧಿಕೃತವಾಗಿ ಭೂಮಿಯನ್ನು ಉಳುಮೆ ಮಾಡುತ್ತಿದ್ದ ಫಲಾನುಭವಿಗಳು ಫಾರಂ ನಂಬರು 53 ರಲ್ಲಿ ಅರ್ಜಿ ಸಲ್ಲಿಸಿಕೊಂಡಿದ್ದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜುರಾಗಿರುವ ಪಿ ನಂಬರ್‌ ಜಮೀನುಗಳ ದುರಸ್ತಿ ಕೆಲಸ ಸುಮಾರು ವರ್ಷಗಳಿಂದ ಹಾಗೆಯೇ ಇದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಗಳು ಅಂಗವಿಕಲರ ವೇತನ, ವೃದ್ಧಾಪ್ಯ ಮತ್ತು ವಿಧವಾ ವೇತನಗಳನ್ನು ವಿತರಿಸುವ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ ವಿನಃ ಸಾರ್ವಜನಿಕರಿಂದ ಸ್ವೀಕರಿಸಿರುವ ಬಹುಪಾಲು ಅಹವಾಲುಗಳಿಗೆ ಉತ್ತರವಿರುವುದಿಲ್ಲ. ಸಾರ್ವಜನಿಕರು ಪಹಣಿ ತಿದ್ದುಪಡಿಗಾಗಿ ವರ್ಷಾ ನುಗಟ್ಟಲೆ ತಾಲೂಕು ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ.

ಸಕಾಲ ಬಿಟ್ಟರೆ ಬೇರೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಸುಮಾರು ಎರಡು ತಿಂಗಳುಗಳಿಂದ ತಾಲೂಕಿಗೆ ಗ್ರೇಡ್‌-1 ತಹಶೀಲ್ದಾರ್‌ ಇಲ್ಲ, ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ತಹಶೀಲ್ದಾರ್‌ ರವರ ಸಹಿ ಮಾಡಬೇಕಾದ ಸುಮಾರು ಕಡತಗಳು ತಿದ್ದುಪಡಿ ಮಾಡಬೇಕಾದ ಕಡತಗಳು ತಿಂಗಳು ಗಟ್ಟಲೆ ಬಾಕಿ ಇವೆ ಇದಕ್ಕಾಗಿ ಸಾರ್ವಜನಿಕರು ತಾಲೂಕು ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ.

ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು ಕನಿಷ್ಠ 2-3 ತಿಂಗಳು ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುವುದಿಲ್ಲ ತುರ್ತಾಗಿ ಕೆಲಸ ಬೇಕೆನ್ನುವವರಿಗೆ ತಾಲೂಕು ಕಚೇರಿಯಲ್ಲಿ ಕೆಲಸ ಆಗುತ್ತಿಲ್ಲ. ಲಭ್ಯವಿರುವ ಗ್ರೇಡ್‌-2 ತಹಶೀಲ್ದಾರ್‌ ಮತ್ತು ಇತರೆ ಅಧಿಕಾರಿಗಳು ಯಾವಾಗಲೂ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಉಪ- ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಮೀಟಿಂಗ್‌ ಅಂತ ಹೋಗಿರುತ್ತಾರೆ. ಸಾರ್ವಜನಿಕರ ಕೆಲಸಗಳು ಯಾವಾಗ ಮಾಡು ತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನು ಚುನಾವಣೆ ಎಂದರೆ ಕಂದಾಯ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿರುತ್ತದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರ ಸೂಕ್ಷ್ಮ ಕ್ಷೇತ್ರ ಎನಿಸಿಕೊಂಡಿದೆ ಇಂತಹ ಪರಿಸ್ಥಿತಿಯಲ್ಲಿ ದಂಡಾಧಿಕಾರಿಗಳೇ ಇಲ್ಲದೆ ಯಾವ ರೀತಿ ಚುನಾವಣೆ ನಡೆಸುತ್ತಾರೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Advertisement

ಈಗಲಾದರೂ ಅಧಿಕಾರಿಗಳು ಚುನಾವಣೆಗೆ ಮುನ್ನವೇ ಕಚೇರಿಯಲ್ಲಿ ಬಾಕಿ ಇರುವ ಕಡತಗಳನ್ನು ಪೂರ್ಣಗೊಳಿಸುತ್ತಾರೋ ಇಲ್ಲವೋ ಹಾಗೂ ಮೇಲಾಧಿಕಾರಿಗಳೂ ಸಹ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next